ಮೂಡುಬಿದಿರೆ, ಜ 27 (DaijiworldNews/SM): ರಾಜ್ಯದ ಮಾಜಿ ಸಚಿವ, ಮೂಡುಬಿದಿರೆಯ ಮಾಜಿ ಶಾಸಕ ಕೆ.ಅಮರನಾಥ ಶೆಟ್ಟಿ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ತನ್ನ ಆಪ್ತ, ರಾಜಕೀಯ ರಂಗದಲ್ಲಿ ಜೆಡಿಎಸ್ ಪಕ್ಷದಲ್ಲಿ ಮೂರುವರೆ ದಶಕದಿಂದ ತನ್ನೊಡನೆ ಇದ್ದ ಕೆ.ಅಮರನಾಥ ಶೆಟ್ಟಿ ಅವರ ಒಡನಾಟವನ್ನು ನೆನಪಿಸಿದ ದೇವೇಗೌಡ ಅವರು ಕಂಬನಿ ಮಿಡಿದರು.
ಅಮರನಾಥ ಶೆಟ್ಟಿ ಅವರು ರಾಜಕೀಯ ಪ್ರಾಮಾಣಿಕತೆ, ಕಾಳಜಿ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಸಂಭಾವಿತ ರಾಜಕಾರಣಿ. ಆರೋಗ್ಯವನ್ನು ಲೆಕ್ಕಿಸದೆ ಈ ಜಿಲ್ಲೆಯ ರಾಜಕೀಯ ಶಕ್ತಿಯಾಗಿ ಪಕ್ಷ ನಿಷ್ಠೆ ಮೆರೆದವರು. ಅವರ ಅಗಲುವಿಕೆಯಿಂದ ಜಿಲ್ಲೆಯ ರಾಜಕಾರಣಕ್ಕೆ ತುಂಬಲಾಗದ ನಷ್ಟವಾಗಿದೆ. ಅವರೇನಿದ್ದರೂ ಇನ್ನು ನೆನಪು ಮಾತ್ರ ಎನ್ನುವುದನ್ನು ಯೋಚಿಸಿ ಆಘಾತವಾಗಿದೆ ಎಂಬುವುದಾಗಿ ಜೆಡಿಎಸ್ ವರಿಷ್ಟ ದೇವೇಗೌಡ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸದಸ್ಯರಾದ ಐವನ್ ಡಿಸೋಜ, ಎಸ್.ಎಲ್ ಬೋಜೇಗೌಡ ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ , ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ರಮಾನಂದ ಶೆಟ್ಟಿ, ಬಲಿಪ ನಾರಯಣ ಭಾಗವತ, ಬಂಟರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ,ಉಡುಪಿ ಶಾಸಕ ರಘುಪತಿ ಭಟ್, ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ವಸಂತ ಬಂಗೇರ, ಬಿ. ಬಿ.ನಿಂಗಯ್ಯ, ಕೆ.ಅಮರನಾಥ ಶೆಟ್ಟಿ ಅವರ ಆಪ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಮೋಗವೀರ ಮಹಾಜನ ಸಭಾದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಾಹಿತಿ ಡಾ. ನಾ. ಮೊಗಸಾಲೆ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಮಂಗಳವಾರ ಅಂತ್ಯ ಸಂಸ್ಕಾರ:
ಅಮರನಾಥ ಶೆಟ್ಟಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳು ಪಾಲಡ್ಕದ ಮುಂಡ್ರುದೆಗುತ್ತುವಿನಲ್ಲಿ ಮಂಗಳವಾರ ೧೦.೩೦ಕ್ಕೆ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ. ಬೆಳಗ್ಗೆ ೮.೩೦ಕ್ಕೆ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಆಶ್ರಿತಾ ನಿವಾಸದಿಂದ ಪೇಟೆಯ ಮುಖ್ಯ ರಸ್ತೆಯಲ್ಲಿ ಎಂ.ಸಿ.ಎಸ್. ಬ್ಯಾಂಕ್ ಆವರಣಕ್ಕೆ ತಂದು ಅಲ್ಲಿಂದ ಆಲಂಗಾರು, ಪಾಲಡ್ಕ ರಸ್ತೆಯಾಗಿ ಮುಂಡ್ರುದೆಗುತ್ತುವಿಗೆ ತರಲಾಗುತ್ತದೆ ಎಂದು ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಈ ನಡುವೆ ಮಂಗಳವಾರ ಅಮರನಾಥ ಶೆಟ್ಟಿಯವರಿಗೆ ಅಂತಿಮ ನಮನ ಸಲ್ಲಿಸಲು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಸೋಮವಾರ ಅಮರನಾಥ ಶೆಟ್ಟರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹಲವು ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು,ವರ್ತಕರು ವ್ಯಾಪಾರ ಸ್ಥಗಿತಗೊಳಿಸಿದ್ದರು. ಮಂಗಳವಾರವೂ ಅಂತಿಮ ಯಾತ್ರೆಯ ವೇಳೆಗೆ ಮೂಡುಬಿದಿರೆ ಬಂದ್ ಆಗುವ ಸಾಧ್ಯತೆಯಿದೆ.