ಕುಂದಾಪುರ, ಜ 28 ( Daijiworld News/MB) : ಹೆಮ್ಮಾಡಿಯಲ್ಲಿ ಮಹಿಳೆಯೊಬ್ಬರು ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಕಾರಣಕ್ಕೆ 500 ರೂಪಾಯಿ ದಂಡ ಹಾಕಲು ಮುಂದಾದ ಹೈವೆ ಪ್ಯಾಟ್ರೋಲಿಂಗ್ ಪೊಲೀಸರನ್ನು ಮಹಿಳೆ ತರಾಟೆಗೆ ತೆಗೆದುಕೊಂಡ ಘಟನೆಯ ವಿಡಿಯೋ ವೈರಲ್ ಮಾಡಿದ ಹಿನ್ನಲೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಜ. ೨೧ರಂದು ಹೆದ್ದಾರಿ ಗಸ್ತು ವಾಹನದಲ್ಲಿ ಎಎಸ್ಐ ತಾರಾನಾಥ್ ಅವರು ಹೆಮ್ಮಾಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ಶಾಂತಿ ಪಿಕಾರ್ಡೊ ಅವರು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾವಣೆ ಮಾಡುವುದನ್ನು ನೋಡಿ ಅವರನ್ನು ತಡೆದು ನಿಲ್ಲಿಸಿದ್ದರು.
ಸೀಟ್ ಬೆಲ್ಟ್ ಹಾಕದೆ ಕಾರು ಚಲಾವಣೆ ಮಾಡಿದಕ್ಕಾಗಿ ೫೦೦ ರೂಪಾಯಿ ದಂಡ ಕಟ್ಟುವಂತೆ ಹೇಳಿದಾಗ ಚಾಲಕಿಯು ವಾಗ್ವಾದ ಮಾಡಿದ್ದಾರೆ. ಹಾಗೆಯೇ ಧಮಕಿ ಹಾಕಿ ಕಾರಿನ ದಾಖಲೆ ಪತ್ರಗಳನ್ನು ತಪಾಸಣೆ ಮಾಡಲು ಬಿಡಲಿಲ್ಲ. ಅಷ್ಟು ಮಾತ್ರವಲ್ಲದೇ ಇತರೆ ವಾಹನಗಾಳನ್ನು ತಪಾಸಣೆ ಮಾಡಲು ಬಿಡದೆ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.
ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪೊಲೀಸರು ನೋಟಿಸ್ ಬರೆದು ಕೊಟ್ಟಾಗ ಅದನ್ನು ಸ್ವೀಕಾರ ಮಾಡಲು ನಿರಾಕರಿಸಿದ್ದಾರೆ. ಈ ವೇಳೆ ಚಾಲಕಿಯು ನಿಂದನೆ ಮಾಡಿ ವಾಗ್ವಾದ ಮಾಡುವುದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸರಕಾರಿ ಕರ್ತವ್ಯ ನಿರ್ವಹಿಸಲು ಮನಸ್ಥೈರ್ಯ ಕುಗ್ಗುವಂತೆ ಮಾಡಿದ್ದಾರೆ ಎಂದು ಪ್ರಕರಣ ದಾಖಲು ಮಾಡಲಾಗಿದೆ.