ಕಾಪು , ಜ 28 ( Daijiworld News/MB) : ದಲಿತ ಸಮುದಾಯಕ್ಕೆ ಮೃತ ದೇಹದ ಅಂತಿಮ ಸಂಸ್ಕಾರ ಮಾಡಲು ಸರಿಯಾದ ಭೂಮಿಯ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ದಲಿತ ನಾಯಕನ ಶವದ ಸಂಸ್ಕಾರವನ್ನು ಗ್ರಾಮ ಪಂಚಾಯತ್ ಮುಂದೆ ಮಾಡಲು ಪ್ರಯತ್ನಿಸಿದ ಘಟನೆ ಪಡುಬಿದ್ರೆಯ ಉಚ್ಚಿಲ ಬಡ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಶಂಕರ್ ಎಂಬವರು ಮುಲ್ಲಗುಡ್ಡೆ ನಿವಾಸಿ ಮಂಗಳವಾರ ನಿಧನವಾಗಿದ್ದಾರೆ. ಆದರೆ ಅವರ ಮೃತ ದೇಹದ ಅಂತ್ಯಕ್ರಿಯೆ ಮಾಡಲು ಸ್ಥಳವಿಲ್ಲದ ಹಿನ್ನಲೆಯಲ್ಲಿ ಶವವನ್ನು ಉಚ್ಚಿಲ ಪಂಚಾಯತ್ ಕಚೇರಿಯ ಮುಂದೆ ಇಟ್ಟುಕೊಂಡು ಅಲ್ಲೇ ಶವದ ಅಂತ್ಯಕ್ರಿಯೆ ಮಾಡಲು ಮಂದಾಗುವ ಮೂಲಕ ಪ್ರತಿಭಟನೆ ನಡೆಸಿದ್ದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಸ್ಥಳಕ್ಕೆ ಪಂಚಾಯತ್ ಆಡಳಿತಾಧಿಕಾರಿಗಳು ಮತ್ತು ಪೊಲೀಸರು ಧಾವಿಸಿದ್ದಾರೆ.
ಈ ಪ್ರದೇಶದಲ್ಲಿ ಸಾರ್ವಜನಿಕ ಹಿಂದೂ ಸ್ಮಶಾನವಿದೆ. ಆದರೆ ದಲಿತ ಸಮುದಾಯಕ್ಕೆ ಸೇರಿದ ಜನರ ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡಲು ಅಲ್ಲಿ ನಿಬಂಧ ಹೇರಲಾಗಿದೆ. ಆ ಸ್ಮಶಾನದಲ್ಲಿ ಮೇಲ್ಜಾತಿಯವರಾದ ಮೊಗವೀರ ಸಮಾಜದವರಿಗೆ ಮಾತ್ರ ಅಂತ್ಯಕ್ರಿಯೆ ಮಾಡಲು ಅವಕಾಶವಿದೆ.
ಈ ಸಾರ್ವಜನಿಕ ಹಿಂದೂ ಸ್ಮಶಾನವು ಸರ್ಕಾರಕ್ಕೆ ಸೇರಿದ್ದರೂ ದಲಿತರಿಗೆ ಆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶವಿಲ್ಲ. ಈ ವಿಷಯದಲ್ಲಿ ದಲಿತ ಸಂಘರ್ಷ ಸಮಿತಿ ತೀವ್ರ ಹೋರಾಟ ನಡೆಸಿದೆ. ಪಂಚಾಯತ್ ಆಡಳಿತ ಜಿಲ್ಲಾಡಳಿತದಿಂದ ಲಕ್ಷ ರೂಪಾಯಿಗಳ ಅನುದಾನವನ್ನು ಪಡೆದಿದ್ದರೂ ದಲಿತರಿಗೆ ಶವ ಸಂಸ್ಕಾರ ಮಾಡಲು ಸ್ಮಶಾನ ನಿರ್ಮಿಸುತ್ತಿಲ್ಲ.