ಮೂಡುಬಿದಿರೆ, ಜ 27 (DaijiworldNews/SM): ಅನಾರೋಗ್ಯದಿಂದ ಸೋಮವಾರ ವಿಧಿವಶರಾದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರ ಅಂತ್ಯಸಂಸ್ಕಾರವು ಪಾಲಡ್ಕ ಗ್ರಾಮದ ಮುಂಡ್ರುದೆಗುತ್ತುವಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಮಂಗಳವಾರ ನಡೆಯಿತು.
ಸೋಮವಾರ ಬೆಳಗ್ಗೆಯಿಂದ ಮೂಡುಬಿದಿರೆ ಗಾಂಧಿನಗರದಲ್ಲಿರುವ ಅಶ್ರಿತಾ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮಂಗಳವಾರ ಬೆಳಗ್ಗೆ ಸುಮಾರು 8.40ಕ್ಕೆ ಅಲ್ಲಿಂದ ತೆರೆದ ವಾಹನದಲ್ಲಿ ಅಂತಿಮಯಾತ್ರೆಯ ಮೂಲಕ ಮುಖ್ಯಪೇಟೆಯಲ್ಲಿರುವ ಎಂಸಿಎಸ್ ಬ್ಯಾಂಕ್ ಎದುರು ತರಲಾಯಿತು. ಅಮರನಾಥ ಶೆಟ್ಟಿ ಅವರು ಅಧ್ಯಕ್ಷರಾಗಿದ್ದ ಎಂಸಿಎಸ್ ಬ್ಯಾಂಕ್ ಆಡಳಿತ, ಸಿಬ್ಬಂದಿ ವರ್ಗ, ರೋಟರಿ ವಿದ್ಯಾಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಸಹಸ್ರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.