ಬಂಟ್ವಾಳ, ಜ 28 (DaijiworldNews/SM): ತುಂಬೆ ವೆಂಟೆಡ್ ಡ್ಯಾಮಿನಲ್ಲಿ 7 ಮೀಟರ್ ನೀರು ಸಂಗ್ರಹಿಸಲು ಸರ್ವೆ ನಡೆಸಲು ಬಂದ ಸಿಬ್ಬಂದಿಗಳಿಗೆ ಸಂತ್ರಸ್ತ ರೈತರು ಅಡ್ಡಿಪಡಿಸಿದ ಘಟನೆ ನಡೆದಿದ್ದು, ಮೊದಲು ಪರಿಹಾರ ನೀಡಿ ಬಳಿಕ ಸರ್ವೆ ನಡೆಸಿ ಎಂಬುವುದಾಗಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತುಂಬೆ ವೆಂಟೆಂಡ್ ಡ್ಯಾಂನಲ್ಲಿ ಸಂಗ್ರಹಿಸುವ ನೀರಿನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯಕ್ಕೆಂದು ಸಿಬ್ಬಂದಿಗಳು ಸಜೀಪಮುನ್ನೂರು ಗ್ರಾಮದ ಮಲಾಯಿಬೆಟು ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ತುಂಬೆ ಡ್ಯಾಂ ಸಂತ್ರಸ್ತರಾದ ರೈತರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಹಾಗೂ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತ ರೈತರು ಒಟ್ಟು ಸೇರಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸಿದರು. ಈಗಾಗಲೇ ಐದು ಮೀಟರ್ ಹಾಗೂ 6 ಮೀಟರ್ ನೀರು ಸಂಗ್ರಹಗೊಂಡಾಗ ಸಂತ್ರಸ್ತ ರೈತರು ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಹಾಗೂ ಸರ್ವೆಯ ಬಗ್ಗೆ ಜಮೀನುದಾರರಿಗೆ ಪೂರ್ವ ಮಾಹಿತಿ ನೀಡಿ ಸರ್ವೆಯ ಆದೇಶ ಪತ್ರವನ್ನು ನೀಡಿ ಸರ್ವೇ ಕಾರ್ಯ ನಡೆಸಬೇಕೆಂದು ತಿಳಿಸಲಾಯಿತು. ರೈತ ಮುಖಂಡರಾದ ಲಕ್ಷ್ಮಣ ನರಿಕೊಂಬು ಸುದೇಶ್ ಮೈಯ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.