ಉಳ್ಳಾಲ, ಜ 29 (Daijiworld News/MSP): ವಿದ್ಯುತ್ ಬಿಲ್ ಪಾವತಿಸದ ಮನೆಯೊಂದಕ್ಕೆ ಬಿಲ್ ಪರಿಶೀಲನೆಗೆ ತೆರಳಿದ ಮೆಸ್ಕಾಂ ಸಿಬ್ಬಂದಿಗೆ ಮನೆಯ ಯಜಮಾನ ಸ್ಥಳೀಯ ಕಾಂಗ್ರೆಸ್ ಮುಖಂಡನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯ ದೇರಳಕಟ್ಟೆ ಜಲಾಲ್ ಭಾಗ್ ಬಳಿ ಮಂಗಳವಾರ ನಡೆದಿದೆ.
ಹಲ್ಲೆಗೊಳಗಾದ ಸಿಬ್ಬಂದಿಯನ್ನು ಕೊಟೇಕಾರು ಲೈನ್ ಮನ್ ಮಧು ನಾಯಕ್ ಎಂದು ಗುರುತಿಸಲಾಗಿದೆ. ಜಲಾಲ್ ಭಾಗ್ ನ ಅಮೀರ್ ಹುಸೈನ್ ವಿದ್ಯುತ್ ಶುಲ್ಕ ಪಾವತಿಸದ ಕಾರಣಕ್ಕೆ ಮೆಸ್ಕಾಂ ಸೂಚನೆಯ ಮೇರೆಗೆ ಲೈನ್ ಮನ್ ಮಧು ಎಂಬವರು ತೆರಳಿ ಮೀಟರ್ ಪರಿಶೀಲಿಸಿ ಬಿಲ್ ಪಾವತಿಸಲು ಸೂಚಿಸಿದರು .ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಧು ಅವರನ್ನು ತರಾಟೆಗೆ ತೆಗೆದುಕೊಂಡ ಅಮೀರ್ ಹುಸೈನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ದಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.