ಮಂಗಳೂರು, ಜ 29 (Daijiworld News/MB) : ಹಲವು ವರ್ಷಗಳು ಕಳೆದರು ಪಂಪ್ವೆಲ್ ಮೇಲ್ಸೇತುವೆ ಪೂರ್ಣವಾಗದೆ ಟ್ರೋಲ್ ಮೂಲಕ ಟೀಕೆಗೆ ಹಾಗೂ ಜನರ ಆಕ್ರೋಶ ಒಳಗಾಗಿದ್ದು ಇದೀಗ ಸಂಚಾರಕ್ಕೆ ಸಿದ್ಧವಾಗಿದ್ದು ಜ.31 ರಂದು ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಈ ಕಾಮಗಾರಿಯು 2010ರಲ್ಲಿ ಆರಂಭವಾಗಿದ್ದು 10 ವರ್ಷಗಳಾದರೂ ಪೂರ್ಣವಾಗಿರಲಿಲ್ಲ. ಹಲವು ಬಾರಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗಡುವು ನೀಡಿದ್ದರು.
ಈ ಮೇಲ್ಸೇತುವೆ ಒಟ್ಟು 600 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲವಿದೆ.
ಮೊದಲ 6 ವರ್ಷಗಳಲ್ಲಿ ಈ ಮೇಲ್ಸೇತುವೆ ಕಾಮಗಾರಿಯು ಭಾರೀ ನಿಧಾನವಾಗಿ ನಡೆದಿದ್ದು ಜನರ ಆಕ್ರೋಶದ ಹಿನ್ನಲೆಯಲ್ಲಿ ಸ್ವಲ್ಪ ಮುನ್ನಡೆ ಕಂಡಿತ್ತು. ಆದರೆ ಪುನಃ ಕಾಮಗಾರಿ ಭಾರೀ ನಿಧಾನವಾಯಿತು.
ಸಂಸದರು ಈ ಕಾಮಗಾರಿ 2019ರ ಜನವರಿ ಅಂತ್ಯದಲ್ಲಿ ಮುಕ್ತಾಯ ಮಾಡುವಂತೆ ನವಯುಗ್ ಸಂಸ್ಥೆಗೆ ಗಡುವು ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹೀಗೆ ಫೆಬ್ರವರಿ, ಮೇ ಎಂದು ಗಡುವು ವಿಸ್ತರಣೆಗೊಳುತ್ತಲ್ಲೇ ಹೋಯಿತು.
ಆ ನಂತರ 2019ರ ಡಿಸೆಂಬರ್ 31ರೊಳಗೆ ಈ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು 2020ರ ಜನವರಿ ಮೊದಲ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು.
ಆದರೆ ಈ ಗಡುವು ಕೂಡಾ ದಾಟಿದ ಹಿನ್ನಲೆಯಲ್ಲಿ ಈ ಮೇಲ್ಸೇತುವೆಯ ಸಂಪೂರ್ಣ ಉಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದರು.
ಕಾಮಗಾರಿ ಕೈಗೆತ್ತಿಕೊಂಡಿರುವ ನವಯುಗ್ ಸಂಸ್ಥೆ ಜನವರಿ ಕೊನೆಯ ವಾರದಲ್ಲಿ ಈ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ಭರವಸೆ ನೀಡಿದ್ದರು. ಹಾಗೆಯೇ ಪ್ರತಿದಿನದ ಮೇಲ್ಸೇತುವೆ ಕಾಮಗಾರಿ ಪ್ರಗತಿ ವರದಿಯನ್ನು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಸಲ್ಲಿಸುತ್ತಿದ್ದರು.
ಈಗ ಈ ಮೇಲ್ಸೇತುವೆ ಕಾಮಗಾರಿ ಕಾರ್ಯ ತ್ವರಿತಗೊಂಡಿದ್ದು ಜ. ೩೧ರೊಳಗೆ ಪೂರ್ಣಗೊಂಡು ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಭಾರೀ ವಿಳಂಬವಾದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಅಷ್ಟು ಮಾತ್ರವಲ್ಲದೆ ಫೇಜ್ ಬುಕ್, ಟಿಕ್ಟಾಕ್ಗಳಲ್ಲಿ ಟ್ರೆಂಡ್ ಕೂಡಾ ಆಗಿತ್ತು.
ಫೇಜ್ಬುಕ್ನಲ್ಲಿ ಟ್ರೆಂಡ್ ಆಗಿರುವ 10 ವರ್ಷದ ಚಾಲೆಂಜ್ನಲ್ಲಿ ಪಂಪ್ವೆಲ್ ಮೇಲ್ಸೇತುವೆಯ 10 ವರ್ಷಗಳ ಹಿಂದೆ ಇದ್ದ ವೃತ್ತದ ಫೋಟೋ ಹಾಗೂ ಈಗಿನ ಕಾಮಗಾರಿ ಸ್ಥಿತಿಯಲ್ಲಿರುವ ಫೋಟೋವನ್ನು ನೆಟ್ಟಿಗರು ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದರು.
ಅಷ್ಟು ಮಾತ್ರವಲ್ಲದೆ "ಪಂಪ್ವೆಲ್ಗ್ ಬಲೆ" ಹಾಡು ಭಾರೀ ಪ್ರಸಿದ್ಧಿ ಪಡೆದು ಎಲ್ಲಾ ಸಮಾರಂಭಗಳಲ್ಲೂ ಅದೇ ಹಾಡು ಕೇಳಿಬರಲು ಆರಂಭಿಸಿದೆ.
ಸಂಸದ ನಳಿನ್ ಕುಮಾರ್ ಅವರು ಜನವರಿ ಮೊದಲ ವಾರ ಎಂದು ಹೇಳಿದ ತುಣುಕನ್ನು ಕೂಡಾ ವಿವಿಧ ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ.