ಮಂಗಳೂರು, ಜ 29 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟುಕೊಂಡಿದ್ದ ಆದಿತ್ಯ ರಾವ್’ಗೆ ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಸುಳ್ಳು ವರದಿಗಾಗಿ ಪವರ್ ಟಿವಿ ಚಾನೆಲ್ ಹಾಗೂ ಸಂಬಂಧಿಸಿದ ಸುದ್ದಿ ವರದಿಗಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಜನವರಿ 23 ರಂದು ಪವರ್ ಟಿವಿ ಚಾನೆಲ್ ನ "ಬಾಂಬ್ ಶರಣಗತಿ" ಎಂಬ ಸುದ್ದಿಯಲ್ಲಿ ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟುಕೊಂಡಿದ್ದ ಆದಿತ್ಯ ರಾವ್ ಅವರ ಹಿಂದೆ ಸನಾತನ ಸಂಘಟನೆ ಇದೆ ಎಂಬ ಸುಳ್ಳು ಸುದ್ದಿ ಪದೇ ಪದೇ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರವಾಗುತ್ತಿತ್ತು. ಈ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದ್ದು ಆದಿತ್ಯ ರಾವ್ ಮತ್ತು ಸನಾತನ ಸಂಘಟನೆ ನಡುವೆ ಯಾವುದೇ ಸಂಬಂಧವಿಲ್ಲ. ಸನಾತನ ಸಂಘಟನೆ ಕೇವಲ ಆಧ್ಯಾತ್ಮಿಕತೆಯನ್ನು ಹರಡುತ್ತಿದೆ ಮತ್ತು ಅದು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ.
" ಸುಳ್ಳು ಸುದ್ದಿ ಮೂಲಕ ಸನಾತನ ಸಂಸ್ಥೆಯನ್ನು ಅಪಮಾನ ಮಾಡಲು, TRPಗಾಗಿ ಇಂತಹ ಸುಳ್ಳು ವರದಿಯನ್ನು ಪ್ರಸಾರ ಮಾಡಿದೆ. ಇದರಿಂದ ಸನಾತನ ಸಂಸ್ಥೆಯ ಕಾರ್ಯಕ್ಕೆ, ಗೌರವಕ್ಕೆ ಅಪಕೀರ್ತಿ ಬಂದಿದೆ. ಹಾಗಾಗಿ ಇಂತಹ ಸುಳ್ಳು ವರದಿ ಪ್ರಸಾರ ಮಾಡುವ, ಬೇಜವಾಬ್ದಾರಿ ಚಾನೆಲ್ ಮೇಲೆ, ಸಂಬಂಧಿಸಿದ ವರದಿಗಾರ ನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ನಾವು ನಿಮ್ಮನ್ನು ಕೋರುತ್ತೇವೆ ”ಎಂದು ಸಂಸ್ಥೆಯ ದೂರಿನಲ್ಲಿ ತಿಳಿಸಲಾಗಿದೆ.
ಉಪ ಸಂಚಾರ ಆಯುಕ್ತ ಲಕ್ಷ್ಮಿ ಗಣೇಶ್ ಅವರಿಗೆ ಸನಾತನ ಸಂಘಟನೆ ಮತ್ತು ಇತರ ಸಮಾನ ಗುಂಪುಗಳು ಈ ದೂರನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪವಿತ್ರನ್, ಮಧುಸೂದನ ಆಯಾರ್, ಶ್ರೀರಾಮ ಸೇನೆಯ ವೆಂಕಟೇಶ್ ಪಡಿಯಾರ್ ಮತ್ತು ಲೋಕೇಶ್ ಕುತ್ತಾರ್, ಶಶಿಧರ್ ಬಾಳಿಗ, ಸುರೇಶ್, ದಯಾನಂದ ವೊಳಚಿಲ್, ಪ್ರಭಾಕರ ನಾಯಕ್ ಉಪೇಂದ್ರ ಆಚಾರ್ಯ ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗೇರ ಇನ್ನಿತರರು ಉಪಸ್ಥಿತರಿದ್ದರು.