ಮಂಗಳೂರು, ಜ.29 (Daijiworld News/PY): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪೊಲೀಸರ ವಶವಾಗಿರುವ ಆದಿತ್ಯ ರಾವ್ ಇದೀಗ ಮಂಗಳೂರಿನಲ್ಲಿಯೂ ಬ್ಯಾಂಕ್ ಲಾಕರ್ ಹೊಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಜ.22 ರಿಂದ ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯ ರಾವ್ನನ್ನು ಪೊಲೀಸರು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ಮುಂದುವರೆಸಿದ್ದಾರೆ. ಮಂಗಳವಾರ ಮಂಗಳೂರಿನಲ್ಲಿ ಒಂದು ಬ್ಯಾಂಕ್ ಖಾತೆ, ಹೊಟೇಲ್ನಲ್ಲಿ ಆತ ಕೆಲಸ ಮಾಡುತ್ತಿದ್ದ ವೇಳೆ ಉಳಿದುಕೊಳ್ಳುತ್ತಿದ್ದ ಕೊಠಡಿ ಹಾಗೂ ಹಾರ್ಡ್ವೇರ್ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಈಗಾಗಲೇ ಪೊಲೀಸರು ಉಡುಪಿ ಕುಂಜಿಬೆಟ್ಟಿನ ಬ್ಯಾಂಕ್ನಲ್ಲಿ ಲಾಕರ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಬಳಿಕ ಆದಿತ್ಯ ರಾವ್ನನ್ನು ಅಲ್ಲಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಮಹಜರು ನಡೆಸಿದ ವೇಳೆ ಅಲ್ಲಿನ ಲಾಕರ್ನಲ್ಲಿ ಸೈನಡ್ ಮಾದರಿಯ ರಾಸಾಯನಿಕ ಪತ್ತೆಯಾಗಿತ್ತು. ಲಾಕರ್ನಲ್ಲಿ ಪತ್ತೆಯಾದ ಸೈನಡ್ ಮಾದರಿಯ ರಾಸಾಯನಿಕವೆಂದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಪೊಲೀಸರು ವರದಿ ನಿರೀಕ್ಷಿಸುತ್ತಿದ್ಧಾರೆ.
ಈ ಮಧ್ಯೆ ಕದ್ರಿಯ ಒಂದು ಬ್ಯಾಂಕ್ನಲ್ಲಿ ಲಾಕರ್ ಇರುವುದು ತಿಳಿದು ಮಂಗಳವಾರ ಅಲ್ಲಿಗೂ ಕರೆದೊಯ್ದು ಮಹಜರು ನಡೆಸಲಾಯಿತು. ಲಾಕರ್ ತೆರೆದು ನೋಡಿದ ವೇಳೆ ಕೆಲವು ಕಾಗದ ಪತ್ರಗಳಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರಿನ ಹೊಟೇಲ್ ಒಂದರಲ್ಲಿ ಆದಿತ್ಯ ರಾವ್ ಕೆಲಸ ಮಾಡುತ್ತಿದ್ದಾಗ ಹೊಟೇಲ್ನ ಕಾರ್ಮಿಕರ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದ. ಆ ಸಂದರ್ಭ ಕೆಲವು ಪುಡಿಗಳನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದ. ಇದನ್ನು ಪ್ರಶ್ನಿಸುತ್ತಿದ್ದವರಿಗೆ ಅದು ವೈಟ್ ಸಿಮೆಂಟ್ ಎಂದು ಹೇಳುತ್ತಿದ್ದ. ಆದಿತ್ಯ ರಾವ್ನನ್ನು ಆತ ಕೆಲಸ ಮಾಡುತ್ತಿದ್ದ ವೇಳೆ ಉಳಿದುಕೊಳ್ಳುತ್ತಿದ್ದ ಕೊಠಡಿಗೆ ಕರೆದೊಯ್ದ ವೇಳೆ ಈ ಪುಡಿಯನ್ನು ಕಲಸಿದ ಪಾತ್ರೆಯನ್ನು ತೋರಿಸಿದ್ದ ಎಂದು ತಿಳಿದುಬಂದಿದೆ. ಆದರೆ ಆತ ಖರೀದಿಸಿದ್ದ ಪುಡಿ ಏನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.
ಇದಲ್ಲದೇ, ಆದಿತ್ಯ ರಾವ್ ನಗರದ ಹಾರ್ಡ್ವೇರ್ ಅಂಗಡಿಯೊಂದರಲ್ಲಿ ಬಿಡಿ ಭಾಗಗಳನ್ನು ಖರೀದಿಸಿದ್ದು, ಆ ಕಾರಣಕ್ಕೆ ಆತನನ್ನು ಪೊಲೀಸರು ಹಾರ್ಡ್ವೇರ್ ಅಂಗಡಿಗೂ ಕರೆದೊಯ್ದು ಮಹಜರು ನಡೆಸಿದ್ದಾರೆ. ಹೊಟೇಲ್ನ ಕೊಠಡಿಯಲ್ಲಿರುವ ವೇಳೆ ಆದಿತ್ಯ ರಾವ್ ಫ್ಯಾನ್ ವಯರ್ ಅನ್ನು ಕೂಡಾ ತುಂಡು ಮಾಡಿದ್ದ ಎನ್ನಲಾಗಿದೆ, ಅಲ್ಲದೇ ಅದನ್ನೇ ಬಾಂಬ್ ತಯಾರಿಕೆಗೆ ಬಳಸಿಕೊಂಡಿರಬಹುದು ಎನ್ನಲಾಗಿದೆ.