ಕಡಬ, ಜ 29 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯನ್ನೇ ತಲ್ಲಣಗೊಳಿಸಿದ ಕಡಬ ತಾಲೂಕಿನ ಕೋಡಿಂಬಾಳದ ಕೊಠಾರಿ ನಿವಾಸಿ ಸ್ಪಪ್ನಾ ಹಾಗೂ ಅವರ ಮೂರು ವರ್ಷದ ಮಗುವಿನ ಮೇಲೆ ನಡೆದ ಆ್ಯಸಿಡ್ ದಾಳಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಮಾನವೀಯತೆಯ ದೃಷ್ಟಿಯಿಂದ ನ್ಯಾಯ ದೊರಕಿಸಿ ಕೊಡುವಂತೆ ಮತ್ತು ಆರೋಪಿ ಪರ ವಕಾಲತ್ತು ವಹಿಸಬಾರದೆಂದು ಆಗ್ರಹಿಸಿ ನೀತಿ ತಂಡದಿಂದ ಪುತ್ತೂರು ಬಾರ್ ಕೌನ್ಸಿಲ್ ಗೆ ಮನವಿಯನ್ನು ನೀಡಲಾಯಿತು.
ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ.ವಿ ಅವರಿಗೆ ದಕ್ಷಿಣ ಕನ್ನಡ ನೀತಿ ತಂಡದ ಸಂಘಟನಾ ಕಾರ್ಯದರ್ಶಿ ಜೋಸ್ ತೋಮಸ್ ರವರು ಮನವಿಯನ್ನು ನೀಡಿ ಸಂತ್ರಸ್ತ ಮಹಿಳೆ ಹಾಗೂ ಮಗುವಿಗೆ ನ್ಯಾಯ ಒದಗಿಸಲು ಪುತ್ತೂರು ವಕೀಲರ ಸಂಘವು ಬೆಂಬಲ ನೀಡಬೇಕೆಂದು ವಿನಂತಿ ಮಾಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ.ವಿ ಹಾಗೂ ಪದಾಧಿಕಾರಿಗಳು ನ್ಯಾಯಯುತವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು. ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.