ಮಂಗಳೂರು, ಜ.29 (Daijiworld News/PY) : ಶಾಸಕ ಯು ಟಿ ಖಾದರ್ ಅವರಿಗೆ ಬೆದರಿಕೆ ಹಾಕಿದ ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಜ.29 ಬುಧವಾರದಂದು ಸುದ್ದಿಗಾರರನ್ನುದ್ದೇಶಿ ಮಾತನಾಡಿದ ಹರೀಶ್ ಕುಮಾರ್ ಅವರು, "ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿಯಲ್ಲಿ, ಕೆಲವು ಯುವಕರು ಶಾಸಕ ಯು.ಟಿ. ಖಾದರ್ ಅವರಿಗೆ ಬೆದರಿಕೆ ಹಾಕಿ ಘೋಷಣೆ ಕೂಗಿದ್ದು, ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ರಾಷ್ಟ್ರ ವಿರೋಧಿಗಳು ಎಂದು ಅವರು ಕರೆಯುತ್ತಾರೆ. ಹಾಗಾದರೆ ಮಾರಣಾಂತಿಕ ಬೆದರಿಕೆಗಳನ್ನು ಒಡ್ಡುವ ಜನರನ್ನು ನಾವು ಏನೆಂದು ಕರೆಯಬೇಕು? ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
"ಶಾಸಕ ಯುಟಿ ಖಾದರ್ ಅವರಿಗೆ ಬೆದರಿಕೆ ಹಾಕಿದ ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಹಾಗೂ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ನಾನು ನಗರ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡುತ್ತೇನೆ. ಎರಡು ವಾರಗಳಲ್ಲಿ ಅವರು ಕ್ರಮಕೈಗೊಳ್ಳಲು ವಿಫಲವಾದರೆ, ಜಿಲ್ಲಾ ಕಾಂಗ್ರೆಸ್ ಪೊಲೀಸ್ ಆಯುಕ್ತರ ಕಚೇರಿಯ ಎದುರು ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಯಾವಾಗಲೂ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದೆ, ಆದರೆ ಜನರನ್ನು ವಿಭಜಿಸಲು ಹಾಗೂ ಅವರ ಹಕ್ಕುಗಳನ್ನು ಕೊಲ್ಲುತ್ತಿರುವುದು ಬಿಜೆಪಿ. ದೇಶಭಕ್ತಿಯ ಬಗ್ಗೆ ಪಾಠಗಳನ್ನು ನೀಡುವ ಮೊದಲು ಅವರು ದೇಶಭಕ್ತಿಯ ಬಗ್ಗೆ ಕಲಿಯಬೇಕು ಹಾಗೂ ಸಂವಿಧಾನವನ್ನು ಅನುಸರಿಸಬೇಕು" ಎಂದು ಹೇಳಿದರು.
"ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ, ಆದರೆ ಕಾಯ್ದೆಯ ಸಾಧಕ-ಬಾಧಕಗಳನ್ನು ಚರ್ಚಿಸಲು ವೇದಿಕೆಯನ್ನು ರಚಿಸಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. 370 ನೇ ವಿಧಿಯನ್ನು ರದ್ದುಪಡಿಸುವಂತಹ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರವು ತೀವ್ರ ಆತುರದಲ್ಲಿದೆ" ಎಂದು ಹರೀಶ್ ಕುಮಾರ್ ಹೇಳಿದರು.
ಅಲ್ಪಸಂಖ್ಯಾತರೊಂದಿಗೆ ಬಿಜೆಪಿ ಇದೆ ಎಂದು ಹೇಳಿದ ರಾಜನಾಥ್ ಸಿಂಗ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್ ಕುಮಾರ್ ಅವರು, ಇದು ಒಳ್ಳೆಯದು. ಆದರೆ, "ಜನರ ದಾಖಲೆಗಳನ್ನು ಸಂಗ್ರಹಿಸಲು ಒಂದು ವರ್ಷ ತಗಲುವುದರಿಂದ ಇದೊಂದು ದೊಡ್ಡ ಸಮಸ್ಯೆಯಾಗಿದೆ.ನೋಟ್ ಬ್ಯಾನ್ ಮಾಡಿದ್ದರಿಂದ ಆದ ದುರಂತಗಳೇ ಇದಕ್ಕೆ ಸಾಕ್ಷಿ." ಎಂದರು.
ಸಿಎಎ ಕುರಿತು ಕಾರ್ಯಾಗಾರ
ಜಿಲ್ಲಾ ಕಾಂಗ್ರೆಸ್ ಸಿಎಎ ಕುರಿತು ಫೆ.6 ರಂದು ಕಾರ್ಡೆಲ್ ಹಾಲ್ ಕುಲಶೇಖರದಲ್ಲಿ ಕಾರ್ಯಾಗಾರವನ್ನು ನಡೆಸಲಿದ್ದು, ಶಾಸಕರು, ಮಾಜಿ ಶಾಸಕರು, ಎಂಸಿಸಿ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಿ ಆರ್ ಶಂಕರ್, ಕಾರ್ಯಕರ್ತ ಭವ್ಯ ನರಸಿಂಹ ಮೂರ್ತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಮಾಜಿ ಶಾಸಕ ಜೆ ಆರ್ ಲೋಬೊ, ಮಾಜಿ ಮೇಯರ್ ಕವಿತಾ ಸನೀಲ್, ಕಾರ್ಪೊರೇಟರ್, ಶಶಿಧರ್ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.