ಮಂಗಳೂರು, ಜ 29 (Daijiworld News/MB) : ಪಂಪ್ವೆಲ್ ಮೇತ್ಸೇತುವೆ ಕಾಮಗಾರಿ ಕೊನೆಗೂ ಭಾಗಶಃ ಪೂರ್ಣವಾಗಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಬುಧವಾರ ಭೇಟಿ ನೀಡಿ ವೀಕ್ಷಿಸಿದ್ದು ಜ.31ರಂದು ಉದ್ಘಾಟನೆಯಾಗುವುದು ಖಚಿತವಾಗಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಶಾಸಕ ವೇದವ್ಯಾಸ್ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಈ ಮೇತ್ಸೇತುವೆ ಕಾಮಗಾರಿಯನ್ನು 2010ರಲ್ಲಿ ನವಯುವ ಸಂಸ್ಥೆ ಗುತ್ತಿಗೆ ಪಡೆದು ಆರಂಭಿಸಿದ್ದು 10 ವರ್ಷವಾದರೂ ಪೂರ್ಣವಾಗದ ಹಿನ್ನಲೆಯಲ್ಲಿ ಭಾರೀ ಟ್ರೋಲ್ ಆಗಿತ್ತು.
ಮೊದಲ 6 ವರ್ಷಗಳಲ್ಲಿ ಈ ಮೇಲ್ಸೇತುವೆ ಕಾಮಗಾರಿಯು ಭಾರೀ ನಿಧಾನವಾಗಿ ನಡೆದಿದ್ದು ಜನರ ಆಕ್ರೋಶದ ಹಿನ್ನಲೆಯಲ್ಲಿ ಸ್ವಲ್ಪ ಮುನ್ನಡೆ ಕಂಡಿತ್ತು. ಆದರೆ ಪುನಃ ಕಾಮಗಾರಿ ಭಾರೀ ನಿಧಾನವಾಯಿತು. ಸಂಸದರು ಈ ಕಾಮಗಾರಿ 2019ರ ಜನವರಿ ಅಂತ್ಯದಲ್ಲಿ ಮುಕ್ತಾಯ ಮಾಡುವಂತೆ ನವಯುಗ್ ಸಂಸ್ಥೆಗೆ ಗಡುವು ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹೀಗೆ ಫೆಬ್ರವರಿ, ಮೇ ಎಂದು ಗಡುವು ವಿಸ್ತರಣೆಗೊಳುತ್ತಲ್ಲೇ ಹೋಯಿತು.
ಆ ನಂತರ 2019ರ ಡಿಸೆಂಬರ್ 31ರೊಳಗೆ ಈ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು 2020ರ ಜನವರಿ ಮೊದಲ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಆದರೆ ಈ ಗಡುವು ಕೂಡಾ ದಾಟಿದ ಹಿನ್ನಲೆಯಲ್ಲಿ ಈ ಮೇಲ್ಸೇತುವೆಯ ಸಂಪೂರ್ಣ ಉಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದರು.
ಕಾಮಗಾರಿ ಕೈಗೆತ್ತಿಕೊಂಡಿರುವ ನವಯುಗ್ ಸಂಸ್ಥೆ ಜನವರಿ ಕೊನೆಯ ವಾರದಲ್ಲಿ ಈ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ಭರವಸೆ ನೀಡಿದ್ದರು. ಹಾಗೆಯೇ ಪ್ರತಿದಿನದ ಮೇಲ್ಸೇತುವೆ ಕಾಮಗಾರಿ ಪ್ರಗತಿ ವರದಿಯನ್ನು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಸಲ್ಲಿಸುತ್ತಿದ್ದರು. ಈಗ ಈ ಮೇಲ್ಸೇತುವೆ ಕಾಮಗಾರಿ ಕಾರ್ಯ ತ್ವರಿತಗೊಂಡಿದ್ದು ಜ. 31ರೊಳಗೆ ಪೂರ್ಣಗೊಂಡು ಉದ್ಘಾಟನೆಯಾಗುವುದು ಖಚಿತವಾಗಿದೆ.