ಕಟೀಲು, ಜ.29 (Daijiworld News/PY) : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮಾಚರಣೆ ನಡೆಯುತ್ತಿದ್ದು, ಕಟೀಲು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ ಅಗಿರುವ ನಳಿನ್ ಕುಮಾರ್ ಕಟೀಲ್ ದೇವಸ್ಥಾನಕ್ಕೆ ಆಗಮಿಸಿದ್ದು, ಕೆಲಸ-ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಕಟೀಲು ಕ್ಷೇತ್ರಕ್ಕೆ ಹಲವಾರು ಗಣ್ಯರು ಆಗಮಿಸಿ ದೇವಿಯ ಆಶಿರ್ವಾದ ಬೇಡುವುದರ ಜೊತೆಗೆ ದೇವಿಯ ಕ್ಷೇತ್ರದ ಕೆಲಸಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೂ ಅಗಿರುವ ನಳಿನ್ ಕುಮಾರ್ ಕಟೀಲ್ ಅವರು ಕೂಡಾ ತರಕಾರಿ ಹೆಚ್ಚುವ ಮೂಲಕ ತಮ್ಮನ್ನು ತಾವು ದೇವಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಹಿಂದಿನಿಂದಲೂ ಕಟೀಲು ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ತಾವೇ ಮುಂದೆ ನಿಂತು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದ ಕೀರ್ತಿ ಇವರಿಗಿದೆ. ಈ ಬಾರಿಯ ಬ್ರಹ್ಮಕಲಶೋತ್ಸವದಲ್ಲಿಯೂ ಕೂಡಾ ಇತರ ಸ್ವಯಂ ಸೇವಕರಂತೆ ಸರತಿಸಾಲಿನಲ್ಲಿ ಕುಳಿತು ಅನ್ನಪ್ರಸಾದಕ್ಕೆ ಬೇಕಾಗುವ ತರಕಾರಿಯನ್ನು ಹೆಚ್ಚುವ ಮೂಲಕ ತಾವೂ ಕೂಡಾ ಸಾಮಾನ್ಯರಲ್ಲಿ ಸಾಮಾನ್ಯ ದೇವಿಯ ಭಕ್ತ ಅನ್ನೋದನ್ನು ತುಳುನಾಡಿನ ಜನರಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ಧಾರೆ. ಇದೀಗ ನಳಿನ್ ಕುಮಾರ್ ಕಟೀಲ್ ಅವರು ಕೆಲಸ ಮಾಡುತ್ತಾ ಇರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇದ್ದು, ಸಂಸದರ ಈ ಕಾರ್ಯವೈಖರಿಗೆ ಪ್ರಶಂಸೆ ಮಾತುಗಳು ಕೇಳಿ ಬರುತ್ತಿವೆ.