ಬೆಳ್ತಂಗಡಿ 29 (DaijiworldNews/SM): 24ದಿನಗಳ ಹಿಂದೆ ಸೈಕಲ್ ನಿಂದ ಬಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಜ.28ರಂದು ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಮೃತ ಬಾಲಕನನ್ನು ಮಿತ್ತಬಾಗಿಲು ಗ್ರಾಮದ ಗುತ್ತಿಗೆಬೆಟ್ಟು ನಿವಾಸಿ ಕೃಷ್ಣಪ್ಪ ಮೂಲ್ಯ ಹಾಗೂ ಜಾನಕಿ ದಂಪತಿಯ ಏಕೈಕ ಪುತ್ರ ವರ್ಷಿತ್ (13) ಎಂದು ಗುರುತಿಸಲಾಗಿದೆ. ವರ್ಷಿತ್ ಬೆದ್ರಬೆಟ್ಟುವಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ.
ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮಂಗಳೂರಿನಲ್ಲಿ ವರ್ಷಿತ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ,ಮೆದುಳು ನಿಷ್ಕ್ರಿಯವಾಗಿ ಪ್ರಜ್ಞೆ ಮರಳದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಜ.29ರಂದು ಮೃತದೇಹವನ್ನು ಊರಿಗೆ ತರಲಾಗಿದ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.