ಮಂಗಳೂರು, ಜ 30 (Daijiworld News/MB) : ಶಾಸಕ ಯು.ಟಿ. ಖಾದರ್ ಅವರಿಗೆ ಕೊಲೆ ಬೆದರಿಕೆ ಹಾಕಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬುಧವಾರ ಕಾವೂರು ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಜ.27ರಂದು ಸೋಮವಾರ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿ ಪರವಾಗಿ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಜನಜಾಗೃತಿ ರ್ಯಾಲಿ ಸಂದರ್ಭ ಯುವಕರ ಗುಂಪೊಂದು ಶಾಸಕ ಯು.ಟಿ.ಖಾದರ್ಗೆ ಜೀವ ಬೆದರಿಕೆ ಒಡ್ಡುವ ಘೋಷಣೆ ಕೂಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಆಯುಕ್ತರಿಗೆ ಪತ್ರ ಬರೆದು ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಒತ್ತಾಯ ಮಾಡಿತ್ತು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಮಾಝಿ ಸಚಿವ ರಮಾನಾಥ್ ರೈ ಅವರು ಈ ಘಟನೆಯನ್ನು ಗಂಭೀರವಾಘಿ ಪರಿಗಣಿಸಿ ಪ್ರಕರಣ ದಾಖಲು ಮಾಡಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಅಷ್ಟು ಮಾತ್ರವಲ್ಲದೇ ಈ ಜೀವ ಬೆದರಿಕೆ ಘೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಯು.ಟಿ. ಖಾದರ್ ಅವರು ನನ್ನ ತಲೆ ಕಡಿದು ಅವರಿಗೆ ಸಂತೋಷವಾಗುವುದಾದರೆ ನಾನು ಕರೆದಲ್ಲಿಗೆ ಬರುತ್ತೇನೆ. ಅವರ ವಿರುದ್ಧ ನಾನು ಕೇಸು ದಾಖಲಿಸಬಹುದು. ಆದರೆ ಅವರಿಗೆ ವಯಸ್ಸಾದ ತಾಯಿ ಇದ್ದಾಳೆ. ಅವರನ್ನು ನೋಡಿಕೊಳ್ಳುವವರು ಯಾರು? ಘೋಷಣೆ ಕೂಗುವ ಸಂದರ್ಭದಲ್ಲಿ ಎಚ್ಚರವಾಗಿರಬೇಕು ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪೊಲೀಸ್ ಆಯುಕ್ತರ ಸೂಚನೆಯಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.