ಬೆಳ್ತಂಗಡಿ, ಜ 28 (DaijiworldNews/SM): ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಾಡಹಗಲೇ ಮನೆಯೊಂದರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ ಘಟನೆ ಗುರುವಾರ ಅಳದಂಗಡಿ ಸಮೀಪ ಕಾಪಿನಡ್ಕ ಎಂಬಲ್ಲಿ ನಡೆದಿದೆ.
ದಯಾನಂದ ಎಂಬವರ ಮನೆಯ ಎದುರಿನ ಬಾಗಿಲಬೀಗ ಮುರಿದು ಕಳ್ಳರು ಒಳ ನುಗ್ಗಿ ಕೃತ್ಯ ಎಸಗಿದ್ದಾರೆ. ಮನೆಯೊಳಗಿನ ಕಬ್ಬಿಣದ ಕಪಾಟು ಹಾಗು ಮೇಜನ್ನು ಒಡೆದು 14 ಪವನ್ ಚಿನ್ನ, ಕರಿಮಣಿ ಸೇರಿದಂತೆ,10 ಸಾವಿರ ನಗದು ಮತ್ತು ಮಾರಾಟ ಮಾಡಲು ಇಟ್ಟಿದ್ದ ಕಾಳುಮೆಣಸನ್ನು ಕಳ್ಳತನ ಮಾಡಲಾಗಿದೆ.ದಯಾನಂದ ಅವರು ಕೂಲಿ ಕೆಲಸಕ್ಕೆ ಹೋಗಿದ್ದು ಪತ್ನಿ ಗೀತಾ ಬಳಂಜ ಪಂಚಾಯತಿಗೆ ಹೋಗಿದ್ದರು. ಅವರು ಪಂಚಾಯತ್ ನಿಂದ ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಘಟನೆಯ ಕುರಿತಂತೆ ವೇಣೂರು ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹತ್ತಿರದ ಸಿಸಿ ಟಿವಿ ಪರಿಶೀಲಿಸಿದ್ದು ಮಧ್ಯಾಹ್ನ ಹನ್ನೆರಡು ಮುಕ್ಕಾಲರಿಂದ ಒಂದೂವರೆ ಗಂಟೆಯೊಳಗೆ ಬೈಕಲ್ಲಿ ಮೂವರು ಬಂದು ಕಳ್ಳತನ ಮಾಡಿರುವ ಮಾಹಿತಿ ಪೋಲೀಸರಿಗೆ ಲಭ್ಯವಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳರ ಬಗ್ಗೆ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲೇ ಕಳ್ಳರನ್ನು ಬಂಧಿಸಲಾಗುವುದು ಎಂದು ಸರ್ಕಲ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.