ಚಿತ್ರಗಳು: ಶೈನ್ ರಾಘು
ಮಂಗಳೂರು, ಜ 28 (DaijiworldNews/SM): ಕಳೆದ 10 ವರ್ಷಗಳಿಂದ ಮಂಗಳೂರಿನ ಜನತೆ ಕಾತರದಿಂದ ಕಾಯುತ್ತಿದ್ದ ಗಳಿಗೆ ಬಂದಿದೆ. ಶುಕ್ರವಾರದಂದು ಮಂಗಳೂರು ನಗರದ ಪಂಪ್ವೆಲ್ ಫ್ಲೈ ಓವರ್ ಲೋಕಾರ್ಪಣೆಗೊಳ್ಳಲಿದೆ. ಆ ಮೂಲಕ ದಶಕದ ಯೋಜನೆಯೊಂದು ಪೂರ್ಣಗೊಂಡಂತಾಗಿದೆ.
2010ರಲ್ಲಿ ಆರಂಭಗೊಂಡಿದ್ದ ಪಂಪ್ವೆಲ್ ಕಾಮಗಾರಿ ಬಳಿಕ ಆಮೆಗತಿ ಪಡೆದುಕೊಂಡಿತ್ತು. ಮಧ್ಯೆ ಸ್ವಲ್ಪ ವೇಗ ಪಡೆದುಕೊಂಡರೂ ಕೂಡ ಕಾಮಗಾರಿ ಅಂದುಕೊಂಡಷ್ಟು ವೇಗ ಪಡೆದುಕೊಂಡಿರಲಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಹಾಗೂ ಟೆಂಡರ್ ವಹಿಸಿಕೊಂಡವರಿಗೆ ಬಿಸಿಮುಟ್ಟಿಸಿದಾಗ ಕೆಲವು ದಿನಗಳ ಕಾಲ ಅಲರ್ಟಾಗಿರುತ್ತಿದ್ದವರು ಮತ್ತೆ ಹಳೆಯ ಚಾಳಿಯನ್ನೇ ಮುಂದುವರೆಸುತ್ತಿದ್ದರು.
ಪರಿಣಾಮ ಮಂಗಳೂರು ಸೇರಿದಂತೆ ದೇಶ ವಿದೇಶಗಳ ಜನರಿಗೆ ಪಂಪ್ವೆಲ್ ಕಾಮಗಾರಿ ವಿಡಂಬಣೆಯ ವಿಚಾರವಾಗ ತೊಡಗಿತು. ಕಾಮಗಾರಿ ಸೇರಿದಂತೆ ಸಂಸದರೂ ಕೂಡ ಟ್ರೇಲ್ ವಿಷಯವಾಗುತ್ತಿದ್ದರು. ಈ ನಡುವೆ ಅಧಿಕಾರಿಗಳನ್ನು ಎಚ್ಚರಿಸುವುದು ಹಾಗೂ ಕಾಮಗಾರಿ ವೇಗವಾಗಿ ನಡೆಸುವಂತೆ ಗುತ್ತಿಗೆದಾರರಿಗೆ ಗಡುವನ್ನು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ಡಿಸೆಂಬರ್ ತಿಂಗಳಾಂತ್ಯಕ್ಕೆ ಫ್ಲೈಓವರ್ ಉದ್ಘಾಟನೆ ಎಂಬುವುದಾಗಿ ತಿಳಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಮುಂದೂಡಲಾಗಿತ್ತು.
ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಶುಕ್ರವಾರದಂದು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇಲ್ಲಿನ ಶಾಸಕರು ಸೇರಿಕೊಂಡು ಫ್ಲೈ ಓವರ್ ಲೋಕಾರ್ಪಣೆಗೊಳಿಸಲಿದ್ದಾರೆ.
ನಿರಂತರ ಟ್ರಾಫಿಕ್ ಜಾಂ:
ಇನ್ನು ಕಳೆದ ಮೂರು-ನಾಲ್ಕು ದಿನಗಳಿಂದ ಈ ಭಾಗದಲ್ಲಿ ನಿರಂತರ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಹಲವು ತಾಸುಗಳ ಕಾಲ ವಾಹನ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಆದರೆ, ಈ ಸಮಸ್ಯೆಗೆ ಶುಕ್ರವಾರದಿಂದ ಬ್ರೇಕ್ ಬೀಳಲಿದೆ. ವಾಹನ ಸವಾರರು ನಿರಾತಂಕದಿಂದ ಪ್ರಯಾಣಿಸಬಹುದಾಗಿದೆ.