ಕಡಬ, ಜ 28 (DaijiworldNews/SM): ತಾಲೂಕಿನ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಿಂದ ಚಿನ್ನ ಹಾಗೂ ನಗದು ಇದ್ದ ಬ್ಯಾಗ್ ಕಳ್ಳತನವಾಗಿದೆ. ಮಾತ್ರವಲ್ಲದೇ ಸಮೀಪದ ಎರಡು ಮನೆಗಳಿಂದಲೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ನಡೆದಿದೆ.
ಕಡಬ ಠಾಣಾ ವ್ಯಾಪ್ತಿಯ ನೀರಾಜೆ ನಿವಾಸಿ ಅಬೂಬಕ್ಕರ್ ಯಾನೆ ಪುತ್ತುಕುಂಞಿ ಎಂಬವರ ಮನೆಯಲ್ಲಿ ಮಲಗಿದ್ದ ಮಹಿಳೆಯೋರ್ವರ ಕಾಲಿನಿಂದ 4 ಪವನ್ ತೂಕದ ಕಾಲು ಚೈನ್, ಹಣವಿದ್ದ ವ್ಯಾನಿಟಿ ಬ್ಯಾಗ್ ಕಳ್ಳತನಗೊಂಡಿದೆ. ಇವರ ಮನೆ ಸಮೀಪದ ನೀರಾಜೆ ನಿವಾಸಿಗಳಾದ ರಝಾಕ್ ಮತ್ತು ಉಮ್ಮರ್ ಎಂಬವರ ಮನೆಯಿಂದ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಕಿಟಕಿಯ ಪಕ್ಕ ಮಲಗಿದ್ದ ಕಾರಣ ಬಾಗಿಲು ತೆಗೆದು ಮಹಿಳೆಯ ಎರಡೂ ಕಾಲಿನಲ್ಲಿದ್ದ ತಲಾ 2 ಪವನ್ ತೂಕದ ಒಟ್ಟು ಎರಡು ಚಿನ್ನದ ಸರ ಕಳವುಗೈಯಲಾಗಿದೆ.
ಅಲ್ಲದೇ ಪಕ್ಕದಲ್ಲಿದ್ದ ವ್ಯಾನಿಟಿ ಬ್ಯಾಗ್ ನಿಂದ ಹಣವನ್ನೂ ಕಳವುಗೈಯ್ಯಲಾಗಿದೆ ಎಂದು ವರದಿಯಾಗಿದೆ. ಬೆಳಿಗ್ಗೆ ಎದ್ದ ವೇಳೆ ಜುಲೈ ಕಾರವರಿಗೆ ಕಾಲಿನ ಚೈನು ಹಾಗೂ ವ್ಯಾನಿಟಿ ಬ್ಯಾಗ್ ಕಳ್ಳತನಗೊಂಡಿರುವುದು ಬೆಳಕಿಗೆ ಬಂದಿದೆ. ಬಳಿಕ ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರಿನಿಂದ ಶ್ವಾನದಳ ಕರೆಸಿ ತನಿಖೆ ನಡೆಸಲಾಗಿದೆ. ನೀರಾಜೆ ನಿವಾಸಿ ಉಪ್ಪಿನಂಗಡಿಯಲ್ಲಿ ಟೈಲರ್ ಆಗಿರುವ ರಝಾಕ್ ರವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದ್ದು ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದು ಈ ವೇಳೆ ಕಳ್ಳರು ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಮಾತ್ರವಲ್ಲದೇ ನೀರಾಜೆ ನಿವಾಸಿ ಉಮ್ಮರ್ ಎಂಬವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದೆ. ಇವರ ಮನೆಯ ಹಿಂಬಾಗಿಲನ್ನು ಹೊರಗಿನಿಂದ ದೂಡಿದ ಪರಿಣಾಮ ಬಾಗಿಲಿನ ಒಳಗಿನ ಚಿಲಕ ಮುರಿದು ಕೆಳಕ್ಕೆ ಬಿದ್ದಿದೆ. ಮನೆಯವರು ಬೆಳಿಗ್ಗೆ ಎದ್ದ ವೇಳೆ ಹಿಂಬಾಗಿಲು ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ.
ಘಟನೆಯ ಕುರಿತಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.