ಕಡಬ, ,ಜ 31(Daijiworld News/MSP): ರಾಮಕುಂಜ ಗ್ರಾಮದ ನಿರಾಶೆಯ ಮನೆಯೊಂದರಿಂದ ಚಿನ್ನ ಹಾಗೂ ನಗದು ಕಳವಾಗಿದ್ದು ಸಮೀಪದ ಇನ್ನೆರಡು ಮನೆಯಿಂದಲೂ ಕಳವಿಗೆ ಯತ್ನಿಸಿದ ಘಟನೆ ಜನವರಿ 30 ರಂದು ಮುಂಜಾನೆ ನಡೆದಿದೆ.
ನೀರಾಜೆ ನಿವಾಸಿ ಅಬೂಬಕ್ಕರ್ ಯಾನೆ ಪುತ್ತು ಎಂಬವರ ಮನೆಯಲ್ಲಿ ಮಲಗಿದ್ದ ಮಹಿಳೆಯೋರ್ವರ ಕಾಲಿನಿಂದ ನಾಲ್ಕು ಪವನ್ ತೂಕದ್ ಕಾಲು ಚೈನು ಹಾಗೂ 800 ರೂ. ಇದ್ದ ವ್ಯಾನಿಟಿ ಕಳವಾಗಿದೆ. ಅಬೂಬಕ್ಕರ್ ಅವರ ಮಗ ಹಾಗೂ ಅರೀಸ್ ಹಾಗೂ ಅವರ ಪತ್ನಿ ಜುಲೈಕಾ ಮಲಗಿದ್ದ ಕೊಠಡಿಯ ಕಿಟಕಿಯ ಬಾಗಿಲು ತೆಗೆತೆಗೆದ ಕಳ್ಳರು ಕಿಟಕಿ ಪಕ್ಕ ಮಲಗಿದ್ದ ಜುಲೈಕಾರ ಕಾಲಿನಲ್ಲಿದ್ದ ತಲಾ ಎರಡು ಪವನ್ ತೂಕದ ೪ ಪವನ್ ಚಿನ್ನದ ಚೈನ್ ಕಳವು ಮಾಡಿದ್ದಾರೆ. ಮಾತ್ರವಲ್ಲದೇ ಕಿಟಕಿ ಪಕ್ಕದಲ್ಲೇ ಇದ್ದ 800 ರೂ. ಕಳವು ಮಾಡಿದ್ದಾರೆ. ಮನೆಯವರು ಕಡಬ ಪೊಲೀಸರಿರಿಗೆ ದೂರು ನೀಡಿದ್ದು ಮಂಗಳೂರಿನಿಂದ ಶ್ವಾನ ದಳ ಕರೆಸಿ ತನಿಖೆ ನಡೆಸಲಾಗಿದೆ. ಇದಲ್ಲದೇ ಸಮೀಪದ ಎರಡು ಮನೆಗಳಿಂದಲೂ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ನಡೆದಿದೆ.
ನೀರಾಜೆ ನಿವಾಸಿ ಉಪ್ಪಿನಂಗಡಿಯಲ್ಲಿ ಟೈಲರ್ ಆಗಿರುವ ರಝಾಕ್ ರವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದ್ದು ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದು ಈ ವೇಳೆ ಕಳ್ಳರು ಪರಾರಿಯಾಗಿರುವುದಾಗಿ ಹೇಳಲಾಗಿದೆ. ಮಾತ್ರವಲ್ಲದೇ ನೀರಾಜೆ ನಿವಾಸಿ ಉಮ್ಮರ್ ಎಂಬವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಲಾಗಿದೆ. ಇವರ ಮನೆಯ ಹಿಂಬಾಗಿಲನ್ನು ಹೊರಗಿನಿಂದ ದೂಡಿದ ಪರಿಣಾಮ ಬಾಗಿಲಿನ ಒಳಗಿನ ಚಿಲಕ ಮುರಿದು ಕೆಳಕ್ಕೆ ಬಿದ್ದಿದೆ. ಮನೆಯವರು ಬೆಳಿಗ್ಗೆ ಎದ್ದ ವೇಳೆ ಹಿಂಬಾಗಿಲು ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ಈ ಎರಡೂ ಮನೆಯಿಂದ ಯಾವುದೇ ಕಳ್ಳತನವಾಗಿಲ್ಲ ಎಂದು ವರದಿಯಾಗಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಕಡಬ ಠಾಣೆ ಎಸ್ಐ ರುಕ್ಮ ನಾಯ್ಕ್, ಸಿಬ್ಬಂದಿಗಳಾದ ಕರುಣಾಕರ, ಶ್ರೀಶೈಲ, ಭಾಗ್ಯಮ್ಮ, ಕನಕರಾಜ್, ಭವಿತ್ ರಾಜ್, ಶ್ವಾನದಳದ ಶಂಕರ್, ಕುಮಾರ್, ಶರತ್ ವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.