ಮಂಗಳೂರು, ಜ 31(Daijiworld News/MSP): ದಶಕದ ಇತಿಹಾಸದ ಪಂಪ್ ವೆಲ್ ಪ್ಲೈ ಓವರ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಲೋಕಾರ್ಪಣೆಗೊಳಿಸಿದ್ದು, ಇಂದಿನಿಂದಲೇ ಜನ ಸಂಚಾರಕ್ಕೆ ಮುಕ್ತವಾಗಿದೆ. ಸಚಿವರು ಜ.31ರ ಬೆಳಗ್ಗೆ ರಿಬ್ಬನ್ ಕತ್ತರಿಸುವ ಮೂಲಕ ಪಂಪ್ ವೆಲ್ ಪ್ಲೈ ಓವರ್ ಜನ ಸಂಚಾರಕ್ಕೆ ಮುಕ್ತಗೊಳಿಸಿದರು. ಸರಳವಾಗಿ ನಡೆದ ಉದ್ಘಾಟನ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ್ ಕಾಮತ್ , ಶಾಸಕ ವೈ ಭರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಇದೀಗ ಮಂಗಳೂರು ನಗರದ ಪಂಪ್ವೆಲ್ ಫ್ಲೈ ಓವರ್ ಲೋಕಾರ್ಪಣೆಗೊಳ್ಳುವ ಮೂಲಕ ದಶಕದ ಯೋಜನೆಯೊಂದು ಪೂರ್ಣಗೊಂಡಂತಾಗಿದೆ. 2010ರಲ್ಲಿ ಆರಂಭಗೊಂಡಿದ್ದ ಪಂಪ್ವೆಲ್ ಕಾಮಗಾರಿ ಬಳಿಕ ಆಮೆಗತಿ ಪಡೆದುಕೊಂಡಿತ್ತು. ಮಧ್ಯೆ ಸ್ವಲ್ಪ ವೇಗ ಪಡೆದುಕೊಂಡರೂ ಕೂಡ ಕಾಮಗಾರಿ ಅಂದುಕೊಂಡಷ್ಟು ವೇಗ ಪಡೆದುಕೊಂಡಿರಲಿಲ್ಲ. ಹತ್ತು ವರ್ಷಗಳ ಕಾಮಗಾರಿ ಅವಧಿ ಪಡೆದುಕೊಂಡ ಪಂಪ್ವೆಲ್ ಮೇಲ್ಸೇತುವೆ ಮಂಗಳೂರು ಸೇರಿದಂತೆ ದೇಶ ವಿದೇಶಗಳ ಜನರಿಗೆ ವಿಡಂಬಣೆಯ ವಿಚಾರವಾಗತೊಡಗಿತು. ಕಾಮಗಾರಿ ಸೇರಿದಂತೆ ಸಂಸದ ನಳಿನ್ ಕುಮಾರ್ ಕೂಡ ಟ್ರೋಲಿಗರ ಆಹಾರವಾಗಿದ್ದರು.
ಇದೀಗ ಪಂಪ್’ವೆಲ್ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿ ಲೋಕರ್ಪಣೆಯಾಗಿದೆ. ಇನ್ನು ಮೇಲ್ಸೇತುವೆ ಜೋಡಿಸಿದ ರಸ್ತೆಗಳಿಗೆ ಡಾಂಬರು ಕೆಲಸ ವೇಗದಿಂದ ನಡೆಯುತ್ತಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು ಉಭಯ ಕಡೆಗಳಿಂದಲೂ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.