ಮಂಗಳೂರು, ಜ.31 (Daijiworld News/PY) : ಪೋಸ್ಟ್ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಮ್ ಹೆಗ್ಡೆಯನ್ನು ದೇಶಕ್ಕೋಸ್ಕರ ವಂದೇ ಮಾತರಂ ಹಾಡಿ ಎಂದು ಹುಡುಗಿಯರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ವಿಮಾನ ನಿಲ್ದಾಣಕ್ಕೆ ತಲುಪಿದ ಸಂದರ್ಭ ಕವಿತಾ ರೆಡ್ಡಿ, ಅಮೂಲ್ಯ ಲಿಯೋನ ಹಾಗೂ ನಜ್ಮಾ ನಜೀರ್ ಎಂಬ ವಿದ್ಯಾರ್ಥಿನಿಯರು ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಹುಡುಗಿಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೋಸ್ಟ್ ಕಾರ್ಡ್ನ ಮುಖಾಂತರ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ನೀವು ದಯವಿಟ್ಟು ನಮ್ಮ ಜೊತೆ ವಂದೇ ಮಾತರಂ ಎಂದು ಘೋಷವಾಕ್ಯ ಹೇಳಿ ಎಂದು ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಮಹೇಶ್ ವಿಕ್ರಮ್ ವಂದೇ ಮಾತರಂ ಹೇಳದೇ ಕೊನೆಯವರೆಗೂ ನಗುತ್ತಲೇ ಕುಳಿತ್ತಿದ್ದರು. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಮಹೇಶ್ ವಿಕ್ರಮ್ ವಿರುದ್ಧ ಕಿಡಿಕಾರಿರುವ ಝೈನಾಬ್ ಸಿಖಂದರ್ ಎಂಬುವರು, “ಸಮಾಜದಲ್ಲಿ ದ್ವೇಷವನ್ನು ಹರಡುವ ಕುಖ್ಯಾತ ಮಹೇಶ್ ವಿಕ್ರಮ್ ಹೆಗಡೆ ಬಳಿ ವಂದೇ ಮಾತರಂ ಹಾಡುವಂತೆ ಕೇಳಿಕೊಳ್ಳಲಾಗಿದೆ. ಅವರು ಇತರರಿಗೆ ಮಾಡುವುದನ್ನೇ ಇದೀಗ ಅವರಿಗೂ ಮಾಡಲಾಗಿದೆ. ಇದು ಸಹ ಸತ್ಯಾಗ್ರಹದ ಹೊಸ ಮಾದರಿ” ಎಂದಿದ್ದಾರೆ.