ಕಾಸರಗೋಡು, ಜ 31 (DaijiworldNews/SM): ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರನಾ ವೈರಸ್ ಕೇರಳದಲ್ಲೂ ಪತ್ತೆಯಾದ ಹಿನ್ನಲೆಯಲ್ಲಿ ಕಾಸರಗೋಡಿನಲ್ಲೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.
ಜನರಲ್ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಚೈನಾದಿಂದ ಬಂದ ೧೮ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ಓರ್ವ ಯುವತಿಯ ರಕ್ತ ಮತ್ತು ಕಫದ ಮಾದರಿಯನ್ನು ಕೊಚ್ಚಿಯ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಚೈನಾದಿಂದ ಮರಳುವವರು ಆಸ್ಪತ್ರೆಗಳಲ್ಲಿ ತಪಾಸಣೆ ನಡೆಸಿ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ನೀಡಿದೆ.
೨೮ ದಿನ ಮನೆಯಲ್ಲಿ ಇರಬೇಕು. ಬಾಹ್ಯ ಸಂಪರ್ಕ ನಡೆಸಬಾರದು. ಯಾವುದಾದರೂ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಚೈನಾದಲ್ಲಿ ವಿದ್ಯಾರ್ಥಿಯಾಗಿದ್ದ ತ್ರಿಶೂರಿನ ವಿದ್ಯಾರ್ಥಿನಿಯಲ್ಲಿ ಕೊರನಾ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಎಲ್ಲಾ ಕ್ರಮ ಗಳನ್ನು ತೆಗೆದುಕೊಂಡಿದೆ. ಚೀನಾದಿಂದ ಕೆಲ ದಿನಗಳ ಹಿಂದೆ ಆಗಮಿಸಿದ್ದ ವಿದ್ಯಾರ್ಥಿಯಲ್ಲಿವೈರಸ್ ಪತ್ತೆಯಾಗಿತ್ತು.