ಆಗುಂಬೆ, ಫೆ. 01 (Daijiworld News/MB) : ಕಾಡಿನ ನಡುವೆ ಇರುವ ಆಗುಂಬೆಯ ಘಾಟಿಯ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು ೯:೩೦ ಗಂಟೆಗೆ ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಕಾರೊಂದು ಹೋಗುತ್ತಿರುವ ಸಂದರ್ಭದಲ್ಲಿ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗು ಅಳುತ್ತಾ ನಿಂತಿದ್ದು ಕಾರು ಚಾಳಕ ಆ ಕೂಡಲೇ ಕಾರು ನಿಲ್ಲಿಸಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಆಗುಂಬೆ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.
ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆಹಚ್ಚಲು ಮುಂದಾದ ಸಂದರ್ಭದಲ್ಲಿ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಎನ್ಆರ್ಪುರ ಮೂಲದವರಾದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು ಎನ್ನಲಾಗಿದ್ದು ಪ್ರವಾಸ ಮುಗಿಸಿ ವಾಪಾಸ್ ಆಗುವ ಸಂದರ್ಭದಲ್ಲಿ ರಾತ್ರಿಯಾಗಿದ್ದರಿಂದ ಪೋಷಕರು ಗಾಡಿಯಲ್ಲಿ ನಿದ್ದೆ ಮಾಡಿದ್ದರು.
ಈ ಸಂದರ್ಭದಲ್ಲಿ ಹಿಂದಿನ ಡೋರ್ ಅಚಾನಕ್ ಆಗಿ ತೆರೆದಿದ್ದು ಮಗು ಹೊರಬಿದ್ದಿದೆ. ಆದರೆ ನಿದ್ರೆಯಲ್ಲಿದ್ದ ಪೋಷಕರಿಗೆ ಮಗು ಹೊರಗೆ ಬಿದ್ದಿರುವಿದಿ ತಿಳಿಯಲಿಲ್ಲ. ಆದರೆ ಕೊಪ್ಪ ಸಮೀಪವಾದಂತೆ ಪೋಷಕರು ಎಚ್ಚರಗೊಂಡು ಮಗು ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಯಾಗಿ ಆ ಕೂಡಲೇ ಅದೇ ಮಾರ್ಗದಲ್ಲಿ ಮಗುವನ್ನು ಹುಡುಕುತ್ತಾ ಹಿಂದಕ್ಕೆ ಬಂದಿದ್ದಾರೆ.
ಮಗು ಪತ್ತೆಯಾಗಿರುವ ವಿಷಯ ಆಗುಂಬೆ ಫಾರೆಸ್ಟ್ ಗೇಟ್ನಲ್ಲಿ ತಿಳಿದು ಬಂದಿದ್ದು ಪೋಷಕರು ಠಾಣೆಗೆ ತೆರಳಿದ್ದಾರೆ.
ಪೊಲೀಸರು ತಂದೆತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.