ಮಂಗಳೂರು, ಫೆ.01 (Daijiworld News/PY) : ಸಿಪಿಐಎಂ ಪಕ್ಷದ ಹಿರಿಯ ಸದಸ್ಯರಾದ ಕೂಸಪ್ಪ ಗಟ್ಟಿ(70)ಯವರು ಹೃದಯಾಘಾತದಿಂದಾಗಿ ಕುಂಪಲದಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಕೂಸಪ್ಪ ಗಟ್ಟಿ ಅವರು ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಆಕರ್ಷಿತರಾಗಿದ್ದರು. ಆ ಕಾಲದಲ್ಲಿ ಬಲಿಷ್ಠವಾಗಿದ್ದ ಬೀಡಿ, ನೇಯ್ಗೆ, ಗೋಡಂಬಿ ಕಾರ್ಮಿಕರು, ರೈತರು ಸೇರಿದಂತೆ ದುಡಿಯುವ ವರ್ಗದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಮಾತ್ರವಲ್ಲದೆ ಬಂಧನಕ್ಕೊಳಗಾಗಿದ್ದರು.
1964ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಗೊಂಡಾಗ ಕೂಸಪ್ಪರವರು ಸಿಪಿಐಎಂನಲ್ಲಿ ದೃಢವಾಗಿ ನಿಂತರು. 1972ರಲ್ಲಿ ಪಕ್ಷದ ನೇತೃತ್ವದಲ್ಲಿ ನಡೆದ ಆಹಾರ ಚಳುವಳಿಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ ಕೂಸಪ್ಪ ಗಟ್ಟಿಯವರು, ಬಳಿಕ ತಮ್ಮ ವಾಸಸ್ಥಳವನ್ನು ಬಂಟ್ವಾಳದಿಂದ ಮಂಗಳೂರಿಗೆ ವರ್ಗಾಯಿಸಿ ಪಕ್ಷದ ಮೈದಾನ ಕಚೇರಿಯ ಸಂಪರ್ಕಕ್ಕೆ ಬಂದು, ಕಾರ್ಮಿಕ ಚಳುವಳಿಯಲ್ಲಿ ತೊಡಗಿಸಿಕೊಂಡರು.
ಸಾರಿಗೆರಂಗದಲ್ಲಿರುವ ನೌಕರರ ಮಧ್ಯೆ ಸಂಘಟನಾ ಕೆಲಸಕ್ಕೆ ಧುಮುಕಿ, ಪಕ್ಷದ ಸಾರಿಗೆ ಶಾಖಾ ಕಾರ್ಯದರ್ಶಿಯಾಗುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಲ್ಲಾ ಹೋರಾಟಗಳಲ್ಲಿ ಸಕ್ರೀಯ ಪಾತ್ರ ವಹಿಸುತ್ತಿದ್ದರು. ತನ್ನ ಇಳಿವಯಸ್ಸಿನಲ್ಲೂ ಪಕ್ಷದ ಬಗ್ಗೆ ಅಪಾರ ಗೌರವವನ್ನು ಹೊಂದಿದ ಕೂಸಪ್ಪ ಗಟ್ಟಿಯವರ ಅಗಲುವಿಕೆಯು ಮಂಗಳೂರಿನ ದುಡಿಯುವ ವರ್ಗದ ಚಳುವಳಿಗೆ ತುಂಬಲಾರದ ನಷ್ಟವಾಗಿದ್ದು, ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಮನೆಗೆ ಭೇಟಿ ನೀಡಿದ ಸಿಪಿಐಎಂ ದ.ಕ.ಜಿಲ್ಲಾ ನಾಯಕರಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್, ಕೆ.ಯಾದವ ಶೆಟ್ಟಿ, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್ರವರು ಮೃತ ಕೂಸಪ್ಪ ಗಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಮೃತರು ಪತ್ನಿ ಮೂವರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.