ಉಪ್ಪಿನಂಗಡಿ, ಫೆ 02 (Daijiworld News/MB) : ತೋಟಗಳಿಂದ ನಿರಂತರವಾಗಿ ಅಡಿಕೆ ಕಳವುಗೈಯುತ್ತಿದ್ದ ತಂಡವೊಂದನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ 25 ಸಾವಿರ ರೂ. ಮೌಲ್ಯದ ಅಡಿಕೆ ಸಮೇತ ಒಟ್ಟು 1.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಉಪ್ಪಿನಂಗಡಿ ಗ್ರಾಮದ ನಳಿಕೆಮಜಲು ನಿವಾಸಿ ಚಂದ್ರಹಾಸ (23) ಕಜೆಕ್ಕಾರಿನ ಜಗದೀಶ (24) ಹಾಗೂ ಬೊಳ್ಳಾವಿನ ಯೊಗೀಶ (18) ಬಂಧಿತ ಆರೋಪಿಗಳು.
ಕಳೆದ ಕಲವು ದಿನಗಳಿಂದ ನಿರಂತರವಾಗಿ ಉಪ್ಪಿನಂಗಡಿ, ಆರ್ತಿಲ, ನೆಕ್ಕರೆ, ಪೆರಿಯಡ್ಕ, ಕಂಪ, ಬೊಳ್ಳಾವು ಪರಿಸರದ ಅಡಿಕೆ ಕಳವಾಗುತ್ತಿತ್ತು.
ತೋಟಗಳಲ್ಲಿದ್ದ ಅಡಿಕೆಯ ಸಣ್ಣ ಮರಗಳಿಂದಲ್ಲೇ ಅಡಿಕೆ ಕಳ್ಳತನವಾಗುತ್ತಿತ್ತು. ಆದರೂ ಈ ಬಗ್ಗೆ ಯಾರೂ ಕೂಡಾ ಪೊಲೀಸ್ಗೆ ದೂರು ನೀಡಿರಲಿಲ್ಲ.
ಜ.31 ರಂದು ಮುಂಜಾನೆ ನೆಕ್ಕರೆ ನಿವಾಸಿ ರಾಜೇಶ್ ಅವರು ನೆಕ್ಕರೆ, ಕಂಪದಲ್ಲಿ ರಸ್ತೆ ಬದಿಯಲ್ಲಿದ್ದ ತನ್ನ ತೋಟಕ್ಕೆ ಹೋಗಿದ್ದು ಅಡಿಕೆ ಮರಗಳಿಂದ ಅಡಿಕೆ ಕಳವುಗೈದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರಾಜೇಶ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಕಲು ಮಾಡಿ ತನಿಖೆ ಮಾಡುತ್ತಿದ್ದು, ತಮಗೆ ದೊರೆತ ಮಾಹಿತಿಯಂತೆ ಅನುಮಾನದಲ್ಲಿ ಈ ಮೂವರು ಪೆರಿಯಡ್ಕದಲ್ಲಿನ ಬಸ್ ನಿಲ್ದಾಣದ ಹತ್ತಿರ ಮೋಟಾರ್ ಸೈಕಲ್ ಸಮೇತವಾಗಿ ಹಿಡಿದು ವಿಚಾರಣೆ ಮಾಡಿದರು.
ಈ ಸಂದರ್ಭ ತೋಟದಲ್ಲಿದ್ದ ಅಡಿಕೆಗಳನ್ನು ಕಳವು ಮಾಡುತ್ತಿದ್ದ ವಿಷಯವನ್ನು ಒಪ್ಪಿಕೊಂಡಿದ್ದು ಪೊಲೀಸರು ಅವರಿಂದ ಅಡಿಕೆ ಕಳವಿಗೆ ಬಳಕೆ ಮಾಡಿದ ೫೦ ಸಾವಿರ ರೂಪಾಯಿ ಮೌಲ್ಯದ ಅಪಾಚಿ ಮೋಟಾರ್ ಸೈಕಲ್ ಹಾಗೂ ಡಿಯೋ ಮೋಟಾರ್ ಸೈಕಲ್ಗಳನ್ನು ವಶಕ್ಕೆ ಪಡೆದುಕೊಂಡರು.
ಹಾಗೆಯೇ ಅವರು ಕಳವು ಮಾಡಿ ಅಂಗಡಿಗಳಿಗೆ ನೀಡಿದ್ದ 25 ಸಾವಿರ ರೂಪಾಯಿ ಮೌಲ್ಯದ ಅಡಿಕೆಗಳನ್ನು ಪೊಲೀಸರು ಸ್ವಾಧೀನಕ್ಕೆ ಪಡೆದಿದ್ದಾರೆ.