ಬಂಟ್ವಾಳ, ಫೆ 2 (DaijiworldNews/SM): ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೋರ್ವನ ಶವ ಇನ್ನೋವಾ ಕಾರಿನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಗ್ರಿ ಸಮೀಪದ ಶಾಂತಿ ನಗರ ಎಂಬಲ್ಲಿ ನಡೆದಿದೆ.
ಕೇರಳ ಮೂಲದ ನಿವಾಸಿ ತಸ್ಲೀಮ್(45) ಎಂಬಾತನೇ ಕೊಲೆಗೀಡಾದವನು. ಕೇರಳದ ನಟೋರಿಯಸ್ ಜಿಯಾ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಹಲವಾರು ಅಪರಾಧ ಹಿನ್ನಲೆವುಳ್ಳವನಾಗಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಘಟನೆ ವಿವರ:
ಭಾನುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಸಜಿಪಮುನ್ನೂರು ಗ್ರಾಮದ ನಗ್ರಿ ಬಳಿಯಲ್ಲಿ ಬಂದುನಿಂತ ಕಾರು ಮಧ್ಯಾಹ್ನದವರೆಗೆ ಅಲ್ಲಿಯೇ ಇದ್ದುದನ್ನು ಗಮನಿಸಿದ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳ್ಳಿರಿಸಿದಲ್ಲೇ ಹಗ್ಗ ಬಿಗಿದು ಬಳಿಕ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದು ಕೊಲೆಗೈದಂತೆ ಕಂಡುಬಂದಿದೆ. ಬೇರೆ ಯಾವುದೋ ಪ್ರದೇಶದಲ್ಲಿ ಕೊಲೆ ನಡೆಸಿ ಬಳಿಕ ಶಾಂತಿ ನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಗುಡ್ಡ ಪ್ರದೇಶದಲ್ಲಿ ಕಾರು ನಿಲ್ಲಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಾಮೀನಿನಲ್ಲಿ ಬಿಡುಗಡೆಯಾಗಿದ್ದ:
ದ.ಕ.ಸೇರಿದಂತೆ ಹಲವೆಡೆಗಳಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೃತ ತಸ್ಲೀಮ್ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂಬ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. 2019ರಲ್ಲಿ ಬಂದರು ಠಾಣಾ ವ್ಯಾಪ್ತಿಯಲ್ಲಿ ಅರುಣ್ ಜ್ಯುವೆಲ್ಲರಿ ಶಾಪ್ ನಲ್ಲಿ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ ಗುಲ್ಬರ್ಗ ಜೈಲು ಸೇರಿದ್ದ. ಬಳಿಕ ಅಲ್ಲಿಂದ ಜಾಮೀನು ಮೂಲಕ ಬಿಡುಗಡೆಯಾಗಿದ್ದ.
ಬಿಡುಗಡೆಯಾದ ಕೂಡಲೇ ಈತನನ್ನು ಗ್ಯಾಂಗ್ ವೊಂದು ಕಾರಿನಲ್ಲಿ ಹಾಕಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗುಲ್ಬರ್ಗ ಪೊಲೀಸ್ ಠಾಣೆಯಲ್ಲಿ ಈತನ ಕಿಡ್ನಾಪ್ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಲಾಗಿದೆ.
2017 ರಲ್ಲಿ ಉಳ್ಳಾಲದಲ್ಲಿ ನಡೆದ ಖಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದು, ಖಾಲಿಯಾ ರಫೀಕ್ ಕೊಲೆಗೆ ಸೇಡು ತೀರಿಸಿಕೊಂಡಿದೆಯೋ ಅಥವಾ ಇನ್ನಾವುದೋ ಕಾರಣಕ್ಕೆ ಕೊಲೆ ನಡೆಸಿದೆಯಾ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ. ಬಂಟ್ವಾಳ ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.