ಮಂಗಳೂರು, ಫೆ 3 (Daijiworld News/MSP): ಬಿಜೆಪಿಗರು "ಉಳ್ಳಾಲಕ್ಕೆ ಬನ್ನಿ" (ಉಳ್ಳಾಲಗ್ ಬಲೆ) ಎಂದು ಟ್ರೋಲ್ ಮಾಡುತ್ತಿದ್ದಾರೆ. ಒಂದು ವೇಳೆ ಬರುವುದಾದರೆ ನಾನೇ ಚಾಲಕನಾಗಿ ಇವರನ್ನೆಲ್ಲಾ ಕರೆದೊಯ್ಯುತ್ತೇನೆ ಎಂದು ಉಳ್ಳಾಲದ ಒಂಬತ್ತುಕೆರೆ ಮನೆಯ ವಿಚಾರವಾಗಿ ಬಿಜೆಪಿಗರಿಗೆ ಸವಾಲು ಹಾಕಿದರು.
ಉಳ್ಳಾಲದ ಒಂಬತ್ತುಕೆರೆಯಲ್ಲಿ 2002ರಲ್ಲೇ 390 ಮನೆಗಳ ನಿರ್ಮಾಣ ಆಗಿದೆ. ವಾಟ್ಸ್ ಆ್ಯಪ್ ಯುನಿವರ್ಸಿಟಿ ಕಟ್ಟಿಕೊಂಡು ಟ್ರೋಲ್ ಮಾಡುತ್ತಿರುವ ಬಿಜೆಪಿಯವರು ಅಲ್ಲಿಗೆ ಹೋಗಿ ನೋಡಲಿ. ಈಗಾಗಲೇ ಅಲ್ಲಿ ಮನೆಗಳ ನಿರ್ಮಾಣ ಆಗಿದ್ದು, ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ದರಿಂದ ತಡೆಯಾಜ್ಞೆ ಬಂದಿದೆ. ಕೇಸ್ ಹಾಕಿದ್ದು ಯಾರು ಎನ್ನುವುದನ್ನು ಶೀಘ್ರ ಬಹಿರಂಗಪಡಿಸುತ್ತೇನೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಟ್ರೋಲ್ ಮಾಡುವವರು ಅಲ್ಲಿ ನಿರ್ಮಿಸಿದ ಮನೆಗಳನ್ನು ನೋಡಿಲ್ಲ. ಒಂಬತ್ತು ಕೆರೆಯಲ್ಲಿ ನಾನು ರೂಪಿಸಿದ ಯೋಜನೆ ಕಾರ್ಯಗತ ಮಾಡುವುದು ಈಗಿನ ಸರಕಾರದ ಜವಾಬ್ದಾರಿ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದನ್ನು ಮೊದಲು ನಿರ್ವಹಿಸಲಿ. ಕೇವಲ ಟ್ರೋಲ್ ಮಾಡುವುದರಿಂದ ಉಪಯೋಗವಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.