ಮಂಗಳೂರು, ಫೆ 3 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಒಳಚರಂಡಿ, ರಾಜಕಾಲುವೆ ದುರಸ್ತಿ ಮುಂತಾದ ಸಮಸ್ಯೆಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಮಾಹಿತಿ ನೀಡಿದರು.
ಒಳಚರಂಡಿ ವ್ಯವಸ್ಥೆ ಪುನರ್ ನವೀಕರಣ ಹಾಗೂ ರಾಜಕಾಲುವೆಗಳ ಅಭಿವೃದ್ಧಿಯ ಕುರಿತು ಮಾಹಿತಿ ನೀಡಲಾಗಿದೆ. ಸರಕಾರದಿಂದ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪು ಗ್ರಾಮದಲ್ಲಿರುವ ಪಚ್ಚನಾಡಿ ಘನತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಪ್ರಾಕೃತಿಕ ವಿಕೋಪದಿಂದ ಕುಸಿತಗೊಂಡಿದ್ದು ಈ ಪ್ರದೇಶದಲ್ಲಿ 27 ಕುಟುಂಬಗಳ ಮನೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇವುಗಳನ್ನು ಸ್ಥಳಾಂತರಗೊಳಿಸುವ ಬಗ್ಗೆ ಗಮನಹರಿಸಬೇಕೆಂದು ಕೋರಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಆಶ್ರಯಿಸಿರುವ ತುಂಬೆ ಡ್ಯಾಂನಲ್ಲಿ 7 ಮೀಟರ್ ನೀರು ಸಂಗ್ರಹಿಸುವ ಯೋಜನೆ ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಅಣೆಕಟ್ಟಿನಲ್ಲಿ 7 ಮೀಟರ್ ನೀರು ನಿಲ್ಲಿಸಿದರೆ ಮುಳುಗಡೆಯಾಗುವ ಭೂ ಪರಿಹಾರ ನೀಡುವ ಕುರಿತು, ತುಂಬೆ ರೇಚಕ ಸ್ಥಾವರದ ಬಳಿ ತಡೆಗೋಡೆ ನಿರ್ಮಾಣಕ್ಕೆ ಒತ್ತು ನೀಡುವ ಕುರಿತು ಅವರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಕೆಟಿಸಿಪಿ ಕಾಯ್ದೆ ಮತ್ತು ಅದರ ನಿಯಮಗಳ ನಿಬಂಧನೆಗಳಲ್ಲಿನ ನ್ಯೂನತೆಗಳಿಂದ ಟಿಡಿಆರ್ ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವಂತೆ ಕೋರಿದ್ದೇವೆ. ಕೆಟಿಸಿಪಿ ಕಾಯ್ದೆ ಮತ್ತು ಅದರ ನಿಯಮಗಳಿಗೆ ತಕ್ಷಣವೇ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.