ಕಾಸರಗೋಡು, ಫೆ 3 (DaijiworldNews/SM): ಚೀನಾದಲ್ಲಿ ಜನ್ಮ ತಾಳಿರುವ ಕೊರೊನಾ ವೈರಸ್ ಇಡೀ ಜಗತ್ತನೇ ನಲುಗಿಸುತ್ತಿದೆ. ಈಗಾಗಲೇ ಇನ್ನೂರ ಅರುವತ್ತಕ್ಕೂ ಅಧಿಕ ಮಂದಿ ಕೊರೊನಾ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಚೀನಾದಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.
ಇನ್ನು ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟಿದ್ದು, ಕೇರಳದಲ್ಲಿ ಮೂವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಚೀನಾದಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಕೇರಳಕ್ಕೆ ಆಗಮಿಸಿ ಪರೀಕ್ಷೆ ನಡೆಸಿದ ಬಳಿಕ ಕೊರೊನಾ ಇರುವುದು ದೃಢಪಟ್ಟಿದೆ. ಈಗಾಗಲೇ ಇಬ್ಬರು ಗುಣಮುಖರಾಗುತ್ತಿದ್ದಾರೆ. ಆದರೆ, ಕಾಸರಗೋಡು ಮೂಲದ ಯುವಕನಲ್ಲಿ ಸೋಮವಾರದಂದು ವೈರಸ್ ಕಾಣಿಸಿಕೊಂಡಿರುವ ಕಾರಣ ಚಿಕಿತ್ಸೆ ಮುಂದುವರೆಸಲಾಗಿದೆ.
ತೀವ್ರ ನಿಗಾ ವಹಿಸಿದ ಆರೋಗ್ಯ ಇಲಾಖೆ:
ಇನ್ನು ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿರುವುದರಿಂದ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು, ತಪಾಸಣೆ ಹಾಗೂ ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಹೆಚ್ಚಿನ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ವೈದ್ಯರ ಸಲಹೆಗಳ ಬಳಿಕ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ. ಆದರೆ ಜನರು ಯಾವುದೇ ಕಾರಣಕ್ಕೆ ಭಯಪಡುವ ಅಗತ್ಯವಿಲ್ಲ. ಯಾವುದೇ ಗೊಂದಲಗಳಿಗೆ ಜನ ಒಳಗಾಗಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇನ್ನು ಕರಾವಳಿ ಭಾಗದಲ್ಲೂ ಕೂಡ ಈ ವೈರಸ್ ಕುರಿತಂತೆ ಎಚ್ಚರಿಕೆ ವಹಿಸಲಾಗಿದೆ. ಕಾಸರಗೋಡಿನ ಕಾಞಂಗಾಡ್ ನಲ್ಲಿ ವೈರಸ್ ಪತ್ತೆಯಾಗಿರುವ ಕಾರಣದಿಂದಾಗಿ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಆದರೆ, ಕರಾವಳಿ ಜನತೆ ಆತಂಕಪಡುವ ಅಗತ್ಯವಿಲ್ಲ.
ಸಾರ್ವಜನಿಕ ಕಾರ್ಯಕ್ರಮಗಳು ರದ್ದು:
ಇನ್ನು ಬೇರೆ ಬೇರೆ ಕಾರಣಗಳಿಂದ ವೈರಸ್ ಹರಡುವ ಭೀತಿಯಿಂದಾಗಿ ಈಗಾಗಲೇ ಕೇರಳ ಸರಕಾರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಅಲ್ಲದೆ, ಸಾರ್ವಜನಿಕ ಕಾರ್ಯಕ್ರಮಗಳನ್ನು, ಖಾಸಗಿ ಕಾರ್ಯಕ್ರಮಗಳನ್ನು ನಡೆಸದಂತೆ ಕೇರಳ ಆರೋಗ್ಯ ಸಚಿವೆ ಶೈಲಜ ಕೂಡ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೇರಳಕ್ಕೂ ಲಗ್ಗೆ ಇಟ್ಟಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಆದರೆ, ಸಾರ್ವಜನಿಕರು ಭಾಯಪಡುವ ಅಗತ್ಯ ಇಲ್ಲ ಎಂಬುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.