ಕಾಸರಗೋಡು, ಫೆ 3 (DaijiworldNews/SM): ಕೊರೊನಾ ವೈರಸ್ ಕಾಸರಗೋಡಿನಲ್ಲಿ ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಚೀನಾದ ವುಹಾನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಕಾಸರಗೋಡಿನ ನಿವಾಸಿಗೆ ಸೋಂಕು ತಗಲಿರುವುದು ದ್ರಢಪಟ್ಟಿದೆ.
ಕಾಸರಗೋಡು ಜಿಲ್ಲೆಯಲ್ಲಿ 80 ಮಂದಿಯ ನಿಗಾ ಇರಿಸಲಾಗಿದೆ. ಈ ಪೈಕಿ ಐದು ಮಂದಿಯ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಓರ್ವನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಇನ್ನು ನಾಲ್ವರ ಪರೀಕ್ಷಾ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ಕೊರೊನಾ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಧ್ಯಾಹ್ನ ತುರ್ತು ಸಭೆ ಸೇರಿ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲಾಯಿತು. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿತು.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು 34 ಐಸೋಲೇಶನ್ ವಾರ್ಡ್ ಗಳನ್ನು ತೆರೆಯಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 18, ಜನರಲ್ ಆಸ್ಪತ್ರೆಗಳಲ್ಲಿ 12 ಐಸೋಲೇಶನ್ ವಾರ್ಡ್ ಗಳನ್ನು ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ನಾಲ್ಕು ವಾರ್ಡ್ ಗಳನ್ನು ಈ ತೆರೆಯಲಾಗಿದೆ.
24 ಗಂಟೆಯೂ ಕಾರ್ಯಾಚರಿಸುವ ಕಾಲ್ ಸೆಂಟರ್ ನ್ನು ತೆರೆಯಲಾಗಿದೆ. ಕಾಞ0ಗಾಡ್ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆ ಕಾರ್ಯಾಚರಿಸುವ ಕಾಲ್ ಸೆಂಟರ್ ತೆರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಜಿಲ್ಲೆಯಲ್ಲಿ ಹದಿನೈದು ಉಪಸಮಿತಿಗಳನ್ನು ತೆರೆಯಲಾಗಿದೆ. ಪ್ರತಿ ದಿನ ಸಂಜೆ 4.30ಕ್ಕೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ತುರ್ತು ಸಂದರ್ಭದಲ್ಲಿ ಜಿಲ್ಲಾ, ಜನರಲ್ ಆಸ್ಪತ್ರೆಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.
ಇದರಿಂದ ಕೇರಳದಲ್ಲಿ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿದೆ. ಈ ಹಿಂದೆ ತೃಶ್ಯೂರು ಮತ್ತು ಆಲಪ್ಪುಯದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಮೂವರು ಚೀನಾದ ವುಹಾನ್ ವಿಶ್ವ ವಿದ್ಯಾನಿಯದ ವಿದ್ಯಾರ್ಥಿಯಾಗಿದ್ದು, ಸಹಪಾಠಿಯಾಗಿದ್ದಾರೆ. ಪ್ರಸ್ತುತ ರೋಗಿಗೆ ಕಾಸರಗೋಡಿನ ಕಾಂಞಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸುಧಾರಣೆಯಾಗಿದ್ದು, ಜಿಲ್ಲಾಸ್ಪತ್ರೆಯ ಪ್ರತ್ಯೇಕ ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈತ ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಕಾಸರಗೋಡಿಗೆ ತಲಪಿದ್ದರು. ಕೇರಳದಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಸೋಂಕು ಪತ್ತೆ ಹಚ್ಚಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ಎರಡು ಸಾವಿರ ಜನರ ಮೇಲೆ ನಿಗಾ ಇರಿಸಲಾಗಿದೆ. ಜನವರಿ 30ರಂದು ತೃಶ್ಯೂರಿನಲ್ಲಿ ಮೊದಲ ಕೊರೊನಾ ವೈರಸ್ ಪತ್ತೆಯಾಗಿತ್ತು. ಫೆಬ್ರವರಿ ಎರಡರಂದು ಆಲಪ್ಪುಯದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿತ್ತು. ಇದೀಗ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಜನವರಿ ಹದಿನೈದರ ಬಳಿಕ ಚೀನಾದಿಂದ ಜಿಲ್ಲೆಗೆ ಆಗಮಿಸಿದವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಈಗಾಗಲೇ ಕೇರಳದಲ್ಲಿ 104 ಮಂದಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ ವರದಿ ಲಭಿಸಬೇಕಿದೆ. ರಾಜ್ಯದಲ್ಲಿ 1900ಕ್ಕೂ ಅಧಿಕ ಮಂದಿಯ ನಿಗಾ ಇರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಈಗಾಗಲೇ ಸೋಂಕು ಗೆ ತುತ್ತಾಗಿರುವ ವಿದ್ಯಾರ್ಥಿಗಳ ಜೊತೆ ಗಿದ್ದ ಇನ್ನಷ್ಟು ಮಂದಿಗೆ ಕೊರೊನಾ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕು ಲಕ್ಷಣ ಕಂಡುಬಂದಲ್ಲಿ ಮನೆಯಲ್ಲಿ ಹದಿನಾಲ್ಕು ದಿನ ಪ್ರತ್ಯೇಕವಾಗಿ ಮಲಗಬೇಕು , ಸೀನುವಾಗ , ಕೆಮ್ಮುವಾಗ ಮೂಗು ಮತ್ತು ಬಾಯಿ ಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕುಟುಂಬ ಸದಸ್ಯ ರು ಮತ್ತು ಹೊರಗಿನವರೊಂದಿಗೆ ಸಾಧ್ಯವಾದಷ್ಟು ಅಂತರ ಕಾಯ್ದು ಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.