ಕಟೀಲು, ಫೆ 3 (DaijiworldNews/SM): ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನೆರವೇರಿದೆ. ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಕಾರ್ಯಕರ್ತರು ಮತ್ತೆ ಮಾನವೀಯ ಕಾರ್ಯ ಮೆರೆದಿದ್ದಾರೆ. ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ೫ವರ್ಷದ ಮಗುವಿಗೆ ನೆರವಾಗಿ ಹೃದಯ ವೈಷಲ್ಯತೆ ತೋರಿದ್ದಾರೆ.
ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ಅವರು ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ವಿವಿಧ ಭಂಗಿಯ ವೇಷಗಳನ್ನು ಧರಿಸಿ ಹಲವು ಮಂದಿಗೆ ನೆರವಾದವರು ಇದೀಗ ಮತ್ತೊಂದು ವಿಭಿನ್ನ ವೇಷ ಧರಿಸಿ ಕಟೀಲು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಂಗ್ರಹಿಸಿದ ಹಣವನ್ನು ನಿಹಾರಿಕ ಎಂಬ ಪುಟ್ಟ ಮಗುವಿಗೆ ಸಹಯಾರ್ಥವಾಗಿ ನೀಡಿದ್ದಾರೆ.
ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ಹಾಗೂ ಬಳಗದವರು ಬ್ರಹ್ಮಕಲಶೋತ್ಸವ ಸಂದರ್ಭ ಭಕ್ತಾದಿಗಳಿಂದ ಒಟ್ಟು 3ಲಕ್ಷದ 136 ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಕ್ಷೇತ್ರದಲ್ಲೇ ಒಟ್ಟು ಹಣವನ್ನು ಚೆಕ್ ಮೂಲಕ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲು ದೇಗುಲದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ನಿಹಾರಿಕಳ ತಾಯಿ ಸೌಮ್ಯ ಅವರಿಗೆ ಹಸ್ತಾಂತರಿಸಿದರು. ಇನ್ನು, ನೇತಾಜಿ ಬ್ರಿಗೇಡ್ ಸಂಘಟನೆಯ ಬಗ್ಗೆ ಕೋಲಾರ ಸಂಸದರಾದ ಮುನಿಸ್ವಾಮಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಸಂದರ್ಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಈಶ್ವರ್ ಕಟೀಲು, ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.