ಉಡುಪಿ, ಫೆ 04 (Daijiworld News/MB) : ಮಹಿಳೆಯೋರ್ವರು ಮಹಿಳಾ ಎಎಸ್ಐಗೆ ಠಾಣೆಯಲ್ಲೇ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ಮಾಡಿದ ಘಟನೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಾಲ್ಕು ವರ್ಷಗಳಿಂದ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿರುವ ಮುಕ್ತಾ ಬಾಯ್ ೪ ದಿನಗಳ ರಜೆ ಮುಗಿಸಿ ಫೆ.೩ ರಂದು ಠಾಣೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೊಡಂಕೂರಿನ ಉಷಾ ನಾಯ್ಕ್ ಎಂಬವರು ಠಾಣೆಗೆ ಆಗಮಿಸಿ ಮುಕ್ತಾ ಅವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಠಾಣೆಯಲ್ಲಿದ್ದ ಇತರ ಸಿಬ್ಬಂದಿಗಳು ತಡೆದಿದ್ದಾರೆ ಎಂದು ಹೇಳಲಾಗಿದೆ.
ಉಷಾ ನಾಯ್ಕ್ ಅವರು ನೆರೆಮನೆಯವರೊಂದಿಗೆ ಆಗಾಗ ಜಗಳ ಮಾಡಿ ಸಣ್ಣ ಪುಟ್ಟ ವಿಷಯಕ್ಕೂ ದೂರು ನೀಡಲು ಠಾಣೆಗೆ ಬರುತ್ತಿದ್ದರು. ಪ್ರಕರಣದ ಕುರಿತು ಸರಿಯಾದ ಮಾಹಿತಿ ಹಾಗೂ ಗಂಭೀರತೆ ಇಲ್ಲದ ಹಿನ್ನಲೆಯಲ್ಲಿ ಆ ದೂರುಗಳನ್ನು ಪೊಲೀಸರು ಸ್ವೀಕರಿಸುತ್ತಿರಲಿಲ್ಲ.
ಈ ಕಾರಣದಿಂದಾಗಿ ಉಷಾ ಅವರು ಆಗಾಗ ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡುತ್ತಿದ್ದರು. ಸೋಮವಾರ ಬಂದು ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಗೆ ಬಂದ ಇತರ ಸಂದರ್ಶಕರಿಗೆ ಹಾಗೂ ಕರ್ತವ್ಯ ನಿರ್ವಹಣೆ ಮಾಡಲು ಪೊಲೀಸ್ ಸಿಬ್ಬಂದಿಗಳಿಗೆ ಅಡ್ಡಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.