ಕಾಸರಗೋಡು, ಫೆ 3 (DaijiworldNews/SM): ಕೊರೊನಾ ವೈರಸ್ ಸೋಂಕು ತಗಲಿ ಕಾಞ೦ಗಾಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಯ ಸ್ಥಿತಿ ಸುಧಾರಿಸುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ ಹದಿಮೂರು ಮಂದಿ ಶಂಕಿತರ ಬಗ್ಗೆ ನಿಗಾ ಇರಿಸಲಾಗಿದೆ. ಈ ಪೈಕಿ ಇಬ್ಬರನ್ನು ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ.
ರಕ್ತದ ಮಾದರಿ ಪರೀಕ್ಷಾ ವರದಿ ಲಭಿಸಿದ ಬಳಿಕವಷ್ಟೇ ಸೋಂಕು ಇದೆಯೇ ಎಂಬುದು ಖಚಿತಗೊಳ್ಳಲಿದೆ. ಸೋಂಕು ತಗಲಿದ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಿ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಆರೋಗ್ಯ ಇಲಾಖೆಯ ನಿಗಾದಲ್ಲಿರುವವರನ್ನು ಬಾಹ್ಯ ಸಂಪರ್ಕ ನಿಷೇಧಿಸಲಾಗಿದೆ. ಮನೆಯಲ್ಲಿಯೇ ತಂಗುವಂತೆ ಆದೇಶ ನೀಡಲಾಗಿದೆ. ಸೋಂಕು ಹಾರಡದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಕಾಞ೦ಗಾಡ್ ಜಿಲ್ಲಾಸ್ಪತ್ರೆ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಗಳನ್ನು ತೆರೆಯಲಾಗಿದ್ದು, ಆರೋಗ್ಯ ಇಲಾಖೆ ಎಲ್ಲಾ ರೀತಿಯಲ್ಲಿ ನಿಗಾ ಇರಿಸಿದೆ. ಚೀನಾ ಸೇರಿದಂತೆ ಹೊರದೇಶದಿಂದ ಜಿಲ್ಲೆಗೆ ಆಗಮಿಸುವವರ ಬಗ್ಗೆ ನಿಗಾ ಇರಿಸಲಾಗಿದ್ದು, ಇದಲ್ಲದೆ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ವೈರಸ್ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಶಾಲೆಗಳಲ್ಲಿ ಹಾಗೂ ಸ್ಥಳೀಯಾಡಳಿತ ಮಟ್ಟದಲ್ಲಿ ತಿಳುವಳಿಕೆ ಮೂಡಿಸಲು ಜಿಲ್ಲಾಡಳಿತ ಮುಂದಾಗಿದೆ. ತುರ್ತು ಸಂದರ್ಭದಲ್ಲಿ ಅಗತ್ಯ ಬಿದ್ದಲ್ಲಿ ಜಿಲ್ಲಾ, ಜನರಲ್ ಆಸ್ಪತ್ರೆಗಳಲ್ಲಿ 108 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.
ಕೊರನಾ ಹಾವಳಿ: ಅಪಪ್ರಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ-ಎಸ್ಪಿ
ಇನ್ನು ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಸಿ ಸಂದೇಶಗಳನ್ನು ರವಾನಿಸಿ ಜನತೆಯನ್ನು ಮತ್ತಷ್ಟು ಭಯ ಭೀತರನ್ನಾಗಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುನ್ನಚ್ಚರಿಕೆ ನೀಡಿದ್ದಾರೆ.
ಬೇರೆ ರೋಗದಿಂದ ಬಳಲುತ್ತಿರುವವರ ಮತ್ತು ರೋಗಿಗಳಲ್ಲದೇ ಇರುವವರ ಭಾವಚಿತ್ರ ಬಳಸಿ ಇವರಿಗೆ ಕೊರೊನಾ ರೋಗ ತಗುಲಿದೆ ಎಂದು ತಪ್ಪು ಮಾಹಿತಿ ಸೃಷ್ಟಿಸುವ ಮತ್ತು ಅದನ್ನು ಪ್ರಸಾರ ಪಡಿಸಲಾಗುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಈ ರೀತಿಯ ಅಕ್ರಮ ನಡೆಸುವವರ ವಿರುದ್ಧ ಐ.ಟಿ. ಕಾಯಿದೆ, ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅಂಥವರ ದೂರವಾಣಿಯನ್ನೂ ವಶಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.