ಕಡಬ, ಫೆ 4 (DaijiworldNews/SM): ಪ್ರಸಿದ್ಧ ಆನ್ ಲೈನ್ ಶಾಪಿಂಗ್ ಕಂಪೆನಿಯೊಂದರ ಹೆಸರನ್ನು ಬಳಸಿಕೊಂಡು ಕಡಬ ಮೂಲದ ಯುವಕನೊಬ್ಬನಿಗೆ ವ್ಯಕ್ತಿಯೋರ್ವ ಪಂಗನಾಮ ಹಾಕಲೆತ್ನಿಸಿರುವ ಘಟನೆ ನಡೆದಿದ್ದು, ಯುವಕನ ಸಮಯ ಪ್ರಜ್ಞೆಯಿಂದ ವಂಚನೆಯ ಜಾಲದಿಂದ ತಪ್ಪಿಸಿಕೊಂಡಿದ್ದಾನೆ.
ಹರಿಯಾಣ ಮೂಲದ ಆಸಾಮಿ ಕಡಬ ಮೂಲದ ಯುವಕನಿಗೆ ಕರೆ ಮಾಡಿ ತಮಗೆ ಸ್ನ್ಯಾಪ್ ಡೀಲ್ ಕಂಪೆನಿಯಿಂದ ಎಂಟುವರೆ ಲಕ್ಷ ರೂಪಾಯಿ ಮೌಲ್ಯದ ಕಾರು ಆಫರ್ ಬಂದಿದೆ. ಆನ್ ಲೈನ್ ಶಾಂಪಿಂಗ್ ನಲ್ಲಿ ಹೆಸರುವಾಸಿಯಾದ ಸ್ನಾಪ್ ಡೀಲ್ ಹೆಸರಿನಲ್ಲಿ ಈ ಆಫರ್ ಬಂದಿದೆ ಎಂಬುವುದಾಗಿ ನಂಬಿಸಿದ್ದಾನೆ.
ಸಾಲದ್ದಕ್ಕೆ, ತಾನು ಹರಿಯಾಣ ಮೂಲದಿಂದ ಕರೆ ಮಾಡಿರುವ ವ್ಯಕ್ತಿ ತನ್ನನ್ನು ಅರುಣ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಯುವಕನ ವಾಟ್ಸಪ್ ಸಂಖ್ಯೆಗೆ ತನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಸ್ನಾಪ್ ಡೀಲ್ ಸಂಸ್ಥೆಯ ಐಡಿಯನ್ನು ಕಳುಹಿಸಿದ್ದಾನೆ. ಆತ ಕಳುಹಿಸಿರುವುದು ಪಕ್ಕ ಮಾಹಿತಿ ಎಂಬುವುದಾಗಿ ನಂಬುವಷ್ಟರ ಮಟ್ಟಿಗೆ ಆರೋಪಿ ಮಾಹಿತಿಯನ್ನು ಸಿದ್ದಪಡಿಸಿ ಯುವಕನಿಗೆ ರವಾನಿಸಿದ್ದಾನೆ. ಕಾರು ಖರೀದಿಸುವುದು ಕಷ್ಟವಾದಲ್ಲಿ ಮೊತ್ತವನ್ನು ನೀಡುವುದಾಗಿ ಸಂತೋಷ್ ಎಂಬವರ ಹೆಸರಿಗೆ ಎಂಟು ಲಕ್ಷ ರೂಪಾಯಿಯ ಚೆಕ್ ಬರೆದು ತೋರಿಸಿದ್ದಾನೆ.
ಆರಂಭದಲ್ಲಿ ಎಂಟು ಸಾವಿರ ರೂಪಾಯಿಯನ್ನು ಅವರು ನೀಡಿದ ಖಾತೆಯೊಂದಕ್ಕೆ ಜಮೆ ಮಾಡುವಂತೆ ಕರೆ ಮಾಡಿದ ಅನಾಮಿಕ ವ್ಯಕ್ತಿ ತಿಳಿಸಿದ್ದು, ಅನುಮಾನವಿದ್ದರೆ ಪೋಲಿಸ್ ಠಾಣೆಗೆ ಹೋಗಿ ಪೋಲಿಸರಿಗೆ ಪೋನ್ ಕೊಡಿ ನಾನು ಮಾತನಾಡುತ್ತೇನೆ ಎಂದು ಜಾಣತನ ತೋರಿದ್ದಾನೆ. ಆದರೆ, ಮೋಸದ ಬಗ್ಗೆ ಎಚ್ಚರ ವಹಿಸಿದ ಯುವಕ ಮೋಸದ ಜಾಲದಿಂದ ತಪ್ಪಿಸಿಕೊಂಡಿದ್ದಾನೆ. ಹಾಗೂ ನೇರವಾಗಿ ಸ್ನಾಪ್ ಡೀಲ್ ಸಂಸ್ಥೆಗೂ ಕರೆ ಮಾಡಿ ವಿಚಾರಿಸಿದ ವೇಳೆ ಇಂತಹ ಯಾವುದೇ ಆಫರ್ ಗಳನ್ನು ನಾವು ಎಂದಿಗೂ ಗ್ರಾಹಕರಿಗೆ ನೀಡುವುದಿಲ್ಲ ಎಂದು ಗ್ರಾಹಕ ಪ್ರತಿನಿಧಿ ತಿಳಿಸಿದ್ದಾರೆ. ಈ ಸಂದರ್ಭ ಮೋಸಗಾರನ ಅಸಲಿಯತ್ತು ಬಯಲಾಗಿದ್ದು, ಪೊಲೀಸರಿಗೆ ಯುವಕ ದೂರು ನೀಡಿದ್ದಾನೆ.