ಮಂಗಳೂರು, ಫೆ 05 (Daijiworld News/MB) : ರಾಜ್ಯ ಸರಕಾರ ಯುವಜನರ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಮಧ್ಯಾಹ್ನದ ಪೌಷ್ಟಿಕ ಆಹಾರ ಯೋಜನೆ ಜಾರಿಗೊಳಿಸಬೇಕು ಎಂದು ಸಂವಾದ- ಯುವ ಮುನ್ನಡೆ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯುವ ಮುನ್ನಡೆ ಸಂಘಟನೆಯ ಆಕಾಶ್, ಯುವ ಮುನ್ನಡೆಯ ಮುಂದಾಳುಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಅದರ ಪ್ರಕಾರ ರಾಜ್ಯದಲ್ಲಿರುವ ಹೆಚ್ಚಿನ ಸರಕಾರಿ ಅನುದಾನಿತ ಕಾಲೇಜುಗಳ ಯುವಜನರು ಮಧ್ಯಾಹ್ನದ ಊಟ ಮಾಡುವುದಿಲ್ಲ. ಹಾಗೆಯೇ ಬಹುತೇಕ ಕಾಲೇಜುಗಳಲ್ಲಿ ಕ್ಯಾಂಟೀನ್ಗಳೇ ಇಲ್ಲ. ಕೆಲವು ಕಾಲೇಜುಗಳಲ್ಲಿ ಕ್ಯಾಂಟೀನ್ಗಳು ಇದ್ದರೂ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಊಟ ದೊರಕುವುದಿಲ್ಲ.
ಈ ಹಿನ್ನಲೆಯಲ್ಲಿ ಯುವಜನರು ಮಧ್ಯಾಹ್ನದ ಊಟ ಮಾಡದೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಹಲವು ಯುವಜನರು ಶೈಕ್ಷಣಿಕವಾಗಿ ಹಿಂದುಳಿಯುವುದು ಮಾತ್ರವಲ್ಲದೇ ಶಿಕ್ಷಣವನ್ನು ಮೊಟಕುಗೊಳಿಸುವ ಪರಿಸ್ಥಿತಿ ಉಂಟಾಗುತ್ತದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಿ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯುವ ಮುನ್ನಡೆ ಸಂಘಟನೆಯ ಪ್ರಾಣೇಶ್, ಬಿಂದಿಯಾ, ಧರಣಪ್ಪ ಉಪಸ್ಥಿತರಿದ್ದರು.