ಮಂಗಳೂರು, ಫೆ 5 (Daijiworld News/MSP): ನವಮಂಗಳೂರು ಬಂದರಿಗೆ ಈ ಸಾಲಿನಲ್ಲಿ ಆಗಮಿಸಿದ 12ನೇ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ ಆಗಮಿಸಿದ್ದು, ಕೊರೊನಾ ವೈರಸ್ ಬಗ್ಗೆ ದ.ಕ ಜಿಲ್ಲೆಯಲ್ಲಿ ಕಟ್ಟೆಚ್ಚರ ಇರುವ ಹಿನ್ನೆಲೆಯಲ್ಲಿ ಬಂದರಿಗೆ ಮಂಗಳವಾರ ಮುಂಬಯಿಯಿಂದ ಆಗಮಿಸಿದ ಪ್ರವಾಸಿ ಹಡಗಿನ ಯಾನಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಇದಕ್ಕಾಗಿ ವಿಶೇಷ ತಪಾಸಣಾ ಘಟಕ ತೆರೆಯಲಾಗಿತ್ತು.
ಕ್ರೂಸ್ ಟರ್ಮಿನಲ್ ಒಳಗೆ ಪ್ರವೇಶಿಸುವ ಸಂದರ್ಭ ಪ್ರವಾಸಿಗರನ್ನು ಸ್ಕ್ಯಾನಿಂಗ್ ಮಾಡಲಾಯಿತು. ಪ್ರವಾಸಿಗರು ಆಗಮಿಸುವ ಸಂದರ್ಭ ಸಾಮಾನ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಟ್ಟೆಚ್ಚರ ಇರುವುದರಿಂದ ತಪಾಸಣೆ ಬಿಗಿಗೊಳಿಸಲಾಗಿತ್ತು ಎಂದು ಚೇರ್ಮನ್ ಎ.ವಿ. ರಮಣ ತಿಳಿಸಿದರು.
ಹಡಗಿನಲ್ಲಿದ್ದ1,800 ವಿದೇಶಿ ಪ್ರವಾಸಿಗರು ಹಾಗೂ 786 ಸಿಬಂದಿ ಇದ್ದು ತಪಾಸಣೆ ಬಳಿಕ ನಗರದ ಶಾಪಿಂಗ್ ಮಾಲ್, ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿ ಪ್ರವಾಸಿಗರು ಸಂದರ್ಶಿಸಿದರು. ಹಡಗು ಬಳಿಕಕೊಚ್ಚಿಗೆ ಪ್ರಯಾಣ ಬೆಳೆಸಿತು.