ಮಂಗಳೂರು, ಫೆ 05 (Daijiworld News/MB) : ಉಳ್ಳಾಲದಲ್ಲಿ ಕರ್ತವ್ಯನಿರತ ಮೆಸ್ಕಾಂ ನೌಕರರ ಮೇಲೆ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದ ಆರೋಪಿತರನ್ನು ಶೀಘ್ರ ಬಂಧನ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೆಸ್ಕಾಂ ನೌಕರರ ಸಂಘದ ವತಿಯಿಂದ ಅತ್ತಾವರ ವಲಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆದಿದೆ.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಎಚ್. ಎಸ್. ಗುರುಮೂರ್ತಿ, ಮೆಸ್ಕಾಂ ನೌಕರರಾದ ಮಧು ನಾಯ್ಕ್, ರಂಗನಾಥ, ಸಂದೇಶ್ ಆಚಾರಿ ಅವರು ವಿದ್ಯುತ್ ಬಿಲ್ ಪಾವತಿಗೆ ವಿಚಾರಿಸಿದಾಗ ಗ್ರಾಹಕ ಅಮೀರ್ ಅಹಮ್ಮದ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಈವರೆಗೂ ಆರೋಪಿತರನ್ನು ಬಂಧನ ಮಾಡಿಲ್ಲ ಎಂದು ದೂರಿದರು.
ವಿದ್ಯುತ್ ಬಿಲ್ ನೀಡಿದ ೧೫ ದಿನಗಳ ಒಳಗಾಗಿ ಹಣ ಪಾವತಿ ಮಾಡಬೇಕು ಎಂಬುದು ನಿಯಮ, ಗ್ರಾಹಕರು ಬಿಲ್ ಪಾವತಿ ಮಾಡದಿದ್ದಲ್ಲಿ ಕಂಪೆನಿ ನೌಕರರು ಅಂತಹ ಸ್ಥಾವರಕ್ಕೆ ಭೇಟಿ ನೀಡಿ ಬಿಲ್ ಪಾವತಿ ಮಾಡುವಂತೆ ಬಳಕೆದಾರರ ಕೇಳಿಕೊಳ್ಳುತ್ತಾರೆ. ಬಿಲ್ ನೀಡಿ ೩೦ ದಿನವಾದರೂ ಪಾವತಿ ಮಾಡದಿದ್ದಲ್ಲಿ ನಿಯಮದಂತೆ ಸಂಪರ್ಕವನ್ನು ಕಡಿತ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಬಿಲ್ ಪಾವತಿ ಮಾಡುವಂತೆ ನೌಕರರು ಸೌಜನ್ಯಯುತವಾಗಿ ಕೇಳಿದಾಗ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಖಂಡನಾರ್ಹವೆಂದು ಹೇಳಿದರು.
ನೌಕರರ ಮನೋಸ್ಥೈರ್ಯ ಕುಸಿಯಲು ಇಂತಹ ಘಟನೆಗಳು ಕಾರಣವಾಗುತ್ತದೆ. ಪೊಲೀಸರು ಆರೋಪಿಯನ್ನು ಈ ಕೂಡಲೇ ಬಂಧನ ಮಾಡಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಈ ಪ್ರತಿಭಟನೆಯಲ್ಲಿ ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸುಮಾರು ೬೦೦ ಮಂದಿ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.