ಉಡುಪಿ, ಫೆ.05 (Daijiworld News/PY) : ಸೌದಿ ಅರೇಬಿಯಾದಲ್ಲಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹಾಗೂ ಮೆಕ್ಕಾ ಮಸೀದಿ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಆರೋಪದಡಿ 2019 ಡಿ.20ರಂದು ಪೊಲೀಸರಿಂದ ಬಂಧಿತರಾಗಿರುವ ಕುಂದಾಪುರ ತಾಲೂಕಿನ ಕೋಟೇಶ್ವರದ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟು ನಿವಾಸಿ ಹರೀಶ್ ಬಂಗೇರ(32) ಬಗ್ಗೆ ಮನೆಯವರಿಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ದೊರಕಿಲ್ಲ.
ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಹರೀಶ್ ಬಂಗೇರ ಅವರ ಪತ್ನಿ ಸುಮನಾ, ನನ್ನ ಪತ್ನಿ ಸೌದಿಯಲ್ಲಿ ಬಂಧನಕ್ಕೊಳಗಾಗಿ ತಿಂಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ಸಂಪರ್ಕವಿಲ್ಲ. ಯಾರ ಬಳಿ ಕೇಳಿದರೂ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಹೇಳುತ್ತಾರೆ. ಸೌದಿಯಲ್ಲಿರುವ ಅವರ ಸ್ನೇಹಿತರೂ ಕೂಡಾ ಸಂಪರ್ಕಕ್ಕೆ ಸಿಗುತ್ತಿಲ್ಲ. ಜನಪ್ರತಿನಿಧಿಗಳು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾತ್ರ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಸದ್ಯಕ್ಕೆ ಹರೀಶ್ ಬಂಗೇರ ಎಲ್ಲಿ ಇದ್ದಾರೆ ಎಂಬುದು ತಿಳಿದಿಲ್ಲ. ಮೊದಲು ಇದ್ದ ಸ್ಥಳದಿಂದ ಹರೀಶ್ ಬಂಗೇರ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸೌದಿಯಲ್ಲಿರುವ ಕೆಲವರು ಈ ಬಗ್ಗೆ ಪ್ರಯತ್ನ ಮಾಡುತ್ತಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದಲ್ಲಿದ್ದು, ಇದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಹರೀಶ್ ಬಂಗೇರ ಅವರ ಬಿಡುಗಡೆಗೆ ಶ್ರಮಿಸುತ್ತಿರುವ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.