ಉಡುಪಿ, ಫೆ 5 (Daijiworld News/MSP): ಅತಿಯಾದ ಸಿಗರೇಟ್ ಸೇವನೆ ಚಟಕ್ಕಾಗಿ ಮನೆ ಬಿಟ್ಟು ಬಂದ ಗೋವಾ ಮೂಲದ 16 ವರ್ಷ ಪ್ರಾಯದ ಬಾಲಕನನ್ನು ಉಡುಪಿ ರೈಲ್ವೆ ರಕ್ಷಣಾ ದಳದ ಪೊಲೀಸರು ಹಾಗೂ ಉಡುಪಿ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದ ಘಟನೆ ನಡೆದಿದೆ.
ಕೇರಳದಿಂದ ಗೋವಾ ಕಡೆಗೆ ಹೋಗುವ ರೈಲಿನಲ್ಲಿ ಟಿಕೇಟು ಪಡೆಯದೇ ಪ್ರಯಾಣಿಸುತ್ತಿದ್ದ ಬಾಲಕನನ್ನು ಉಡುಪಿ ರೈಲ್ವೆ ರಕ್ಷಣಾ ದಳದ ಪೊಲೀಸರು ವಿಚಾರಿಸಿದಾಗ ಮನೆಯಲ್ಲಿ ಹೇಳದೆ ಹೊರಟುಬಂದಿದ್ದು ತಿಳಿದುಬಂದಿದ್ದು ತಕ್ಷಣ ರೈಲ್ವೇ ಪೊಲೀಸರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭೇಟಿ ನೀಡಿ ವಿಚಾರಿಸಿದಾಗ ವಿಪರೀತ ಸಿಗರೇಟ್ ಸೇವನೆ ಚಟ ಇರುವ ಬಗ್ಗೆ ತಿಳಿದುಬಂದಿದ್ದು, ಪೋಷಕರ ಬಗ್ಗೆ ಮಾಹಿತಿ ಪಡೆದು ಬಾಲಕನನ್ನು ಹೆಚ್ಚಿನ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಉಡುಪಿಯಲ್ಲಿ ದಾಖಲಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆರ್.ಪಿ.ಏಫ್. ಇನ್ಸ್ಪೆಕ್ಟರ್ ಸಂತೋಷ್ ಗಾವ್ನ್ಕರ್, ಮೊಹಮ್ಮದ್, ಮಕ್ಕಳ ಸಹಾಯವಾಣಿಯ ತ್ರಿವೇಣಿ, ವೃಷಕ್ ಭಾಗವಹಿಸಿದ್ದರು.