ಕಾಸರಗೋಡು, ಫೆ 5 (Daijiworld News/MSP): ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 6. 2 ಕೋಟಿ ರೂ . ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು , ಮಹಾರಾಷ್ಟ್ರದ ಇಬ್ಬರನ್ನು ಬಂಧಿಸಲಾಗಿದೆ. 30 ವರ್ಷಗಳ ಬಳಿಕ ಕಾಸರಗೋಡಿನಲ್ಲಿ ನಡೆಯುತ್ತಿರುವ ಅತೀ ದೊಡ್ಡ ಕಾರ್ಯಾಚರಣೆಯಾಗಿದೆ.
ಕಾರಿನಿಂದ ಹದಿನೈದೂವರೆ ಕಿಲೋ ಚಿನ್ನದ ಬಿಲ್ಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಬೇಕಲ ಬಳಿಯಿಂದ ಕಾರನ್ನು ವಶಕ್ಕೆ ಪಡೆದು ಅಕ್ರಮ ಚಿನ್ನ ಸಾಗಾಟವನ್ನು ಪತ್ತೆಹಚ್ಚಿದ್ದಾರೆ . ಕಾರಿನಲ್ಲಿದ್ದ ಮಹಾರಾಷ್ಟ್ರ ಸಾಂಗ್ಲಿಯ ಖೇತನ್ ( 29) ಮತ್ತು ಆಕಾಶ್ ( 23) ನನ್ನು ಬಂಧಿಸಲಾಗಿದೆ .
ಕಣ್ಣೂರು ಕಡೆಯಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಕಣ್ಣೂರು - ಹಾಗೂ ಕಾಸರಗೋಡಿನ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು , ಮಂಗಳವಾರ ಸಂಜೆ ಬೇಕಲ ಪಳ್ಳಿಕೆರೆ ಟೋಲ್ ಬೂಟ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಬಂದ ಮಹಾರಾಷ್ಟ್ರ ನೋಂದಾವಣೆಯ ಕಾರು ತಡೆದು ನಿಲ್ಲಿಸಿದ್ದು , ಕಾರಲ್ಲಿದ್ದವರು ಪರಾರಿಯಾಗಲೆತ್ನಿಸಿದ್ದಾರೆ.
ಕೂಡಲೇ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಕಾರನ್ನು ತಪಾಸಣೆ ನಡೆಸಿದಾಗ ಸೀಟಿನಡಿಯಲ್ಲಿ ಪ್ರತ್ಯೇಕ ರಂಧ್ರ ತಯಾರಿಸಿ ಅದರಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ .ಮುಂಭಾಗದ ಮುಂಭಾಗ ಹಾಗೂ ಹಿಂಭಾಗದ ಎರಡು ಸೀಟಿನಡಿಯಲ್ಲಿ ರಂಧ್ರ ತಯಾರಿಸಲಾಗಿತ್ತು . ತಲಶ್ಯೆರಿಯಿಂದ ಮಹಾರಾಷ್ಟ್ರಕ್ಕೆ ಚಿನ್ನ ಸಾಗಾಟ ಮಾಡುತ್ತಿದ್ದುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ . ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.