ಉಡುಪಿ, ಫೆ.05 (Daijiworld News/PY) : "ಜಗತ್ತೇ ಗಾಂಧೀಜಿಯವರನ್ನು ಗೌರವಿಸುತ್ತಿರುವಾಗ ಮೋದಿ ಸರಕಾರ 150ನೇ ಗಾಂಧಿ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಗಾಂಧಿ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ಹೆಗಡೆಯವರ ವಿವಾದಾತ್ಮಕ ಹೇಳಿಕೆ ಬಗ್ಗೆ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು" ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಆಗ್ರಹಿಸಿದ್ದಾರೆ.
"ಸಂಸದ ಅನಂತ್ ಕುಮಾರ್ ಹೆಗಡೆಯವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ಹಿಂದೆ ಸಂವಿಧಾನ ಬದಲಾಯಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅನೇಕ ಸಲ ಸಂವಿಧಾನ ವಿರೋಧಿ, ಪ್ರಚೋದನಾತ್ಮ ಹೇಳಿಕೆಗಳನ್ನು ನೀಡಿ ತನ್ನ ಸಂವಿಧಾನ ವಿರೋಧಿ ನಿಲುವನ್ನು ಪ್ರಕಟಿಸಿ ಟೀಕೆಗೆ ಗುರಿಯಾಗಿದ್ದರು. ಈಗ ಹೆಗಡೆಯವರು ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಒಂದು ನಾಟಕ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವುದರೊಂದಿಗೆ ದೇಶಭಕ್ತಿಯೇ ತನ್ನ ಮೂಲ ಮಂತ್ರ ಎಂದು ಹೇಳಿಕೊಳ್ಳುವ ಪಕ್ಷವೊಂದರ ಉನ್ನತ ಮುಖಂಡರು ರಾಷ್ಟ್ರಪಿತನನ್ನೇ ಹಂಗಿಸುವ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ" ಎಂದರು.
"ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಚಳುವಳಿಯನ್ನು ಅವಮಾನಿಸುವುದು ದೇಶದ್ರೋಹ ಕೃತ್ಯ ಆಗುವುದಿಲ್ಲವೇ? ಗಾಂಧೀಜಿಯವರು ಪ್ರತಿಪಾದಿಸಿದ ಅಹಿಂಸೆ ಮತ್ತು ಸತ್ಯಾಗ್ರಹ ಹೋರಾಟದ ಮಾದರಿಯನ್ನು ಇಡೀ ಜಗತ್ತೇ ಗೌರವದಿಂದ ಕಾಣುತ್ತಿದೆ. ಜಗತ್ತಿನ ಎಲ್ಲಾ ಧರ್ಮಗಳು ಅಹಿಂಸೆಯನ್ನು ಪ್ರತಿಪಾದಿಸುತ್ತಿವೆ. ಸಂವಿಧಾನ ವಿರೋಧಿ ಹಾಗೂ ಸ್ವಾತಂತ್ರ್ಯ ಸಂಗ್ರಾಮವನ್ನು ಹೀಗಳೆಯುವ ಮೂಲಕ ಹೆಗಡೆಯವರು ಮಾನಸಿಕ ಸ್ಥೀಮಿತ ಕಳೆದುಕೊಳ್ಳುತ್ತಿದ್ದಾರೆ ಎನ್ನಬೇಕು. ಕೇಂದ್ರ ಬಿಜೆಪಿ ಸರಕಾರದ ನಿಲುವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ಮತ್ತು ಗಾಂಧಿ ಪ್ರತಿಪಾದಿಸಿದ ಐಕ್ಯತೆಗೆ ಸಂಪೂರ್ಣ ವಿರುದ್ಧವಾಗಿದೆ" ಎಂದು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಗೆ ಮಾರಕ :
"ಪೌರತ್ವ ಕಾಯ್ದೆ ವಿರುದ್ದ ಪ್ರತಿಭಟಿಸುವವರನ್ನು ಗುಂಡಿಕ್ಕಿ ಎಂದು ಹೇಳಿಕೆ ನೀಡಿರುವ ಸಚಿವ ಅನುರಾಗ್ ಠಾಕೂರ್ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಚಾರದಲ್ಲಿಯೂ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿಬೇಕಾಗುತ್ತದೆ. ಜನ ವಿರೋಧಿ ಕಾನೂನು ಹಾಗೂ ಜನರ ಧ್ವನಿಯನ್ನು ಹತ್ತಿಕ್ಕುವ ಬಿಜೆಪಿ ನಿಲುವಿನಿಂದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಸರ್ವಾಧಿಕಾರಿ ರಾಷ್ಟ್ರವಾಗಿ ರೂಪಾಂತರವಾಗುತ್ತಿದೆ. ಸಂಸತ್ತಿನಲ್ಲಿಯ ಬಹುಮತವನ್ನು ಆಧಾರವಾಗಿಟ್ಟುಕೊಂಡು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಬಿಜೆಪಿಯ ಈ ನಿಲುವು ಜನವಿರೋಧಿ ನಿಲುವಾಗಿದೆ" ಎಂದು ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.