ವರದಿ : ಅನುಷ್ ಪಂಡಿತ್
ಚಿತ್ರ: ರಮೇಶ್ ಪಂಡಿತ್
ಮಂಗಳೂರು, ಫೆ 05 : ಉದ್ಯಾನವನಗಳು ಮನಸ್ಸಿಗೆ ಮುದ ನೀಡುವುದಲ್ಲದೇ ನಗರಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಗರದಲ್ಲಿ ಬಹು ಮಹಡಿ ಕಟ್ಟಡಗಳ ನಿರ್ಮಾಣಗಳಿಂದ ಸಸ್ಯ ಸಂಕುಲಗಳ ವಿನಾಶವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮರ ಗಿಡಗಳನ್ನು ಕಡಿದು ಪ್ರಕೃತಿ ನಾಶ ನಡೆಯುತ್ತಿದೆ. ಪ್ರಕೃತಿ ಇಲ್ಲದೇ ಪ್ರಾಣಿ ಸಂಕುಲವಾಗಲೀ ಮನುಷ್ಯನಾಗಲಿ ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪಾರ್ಕ್ಗಳ ನಿರ್ಮಾಣ ಅಗತ್ಯ ಹಾಗೂ ಅನಿವಾರ್ಯ.
ಕಳೆದ ಹಲವಾರು ವರುಷಗಳಿಂದ ಎಕ್ಕೂರು ಬಜಾಲು ಪ್ರದೇಶ ಅಭಿವೃದ್ಧಿ ಕಾಣದೆ ನಿರ್ಲಕ್ಷಕ್ಕೆ ಒಳಗಾಗಿತ್ತು. ಮನೆ ನಿವೇಶನಗಳು ಕೈಗೆಟಕುವ ದರದಲ್ಲಿದ್ದರೂ ಯಾರು ಆಸಕ್ತಿ ತೋರಿಸುತ್ತಿರಲಿಲ್ಲ. ಕಾರಣ ಸೂಕ್ತ ರಸ್ತೆ ಸೌಲಭ್ಯದ ಕೊರತೆ .ಆದರೆ ಈಗ ರಸ್ತೆಗಳು ಅಗಲವಾಗಿ ಕಾಂಕ್ರೀಟಿಕರಣಗೊಂಡಿದ್ದು, ಅದರ ಜೊತೆಗೆ ವಸತಿ ಸಮುಚ್ಚಯ ಕಟ್ಟಡಗಳು ಆಕಾಶದೆತ್ತರಕ್ಕೆ ಬೆಳೆದು ನಿಂತು ದುಬಾರಿ ಬೆಲೆಯಲ್ಲಿ ಜನಸಾಮಾನ್ಯರಿಗೆ ಕೈಗೆಟಕುವಂತಿಲ್ಲ.
ಇವೆಲ್ಲದಕ್ಕೂ ಪೂರಕವಾಗಿ ಕಂಕನಾಡಿ ಬಿ ವಾರ್ಡ್ನ ಎಕ್ಕೂರು ಕೆ.ಎಚ್.ಬಿ ಕಾಲನಿಯಲ್ಲಿ ನೂತನವಾಗಿ ಚಿಣ್ಣರ ಪಾರ್ಕ್ ನಿರ್ಮಾಣ ವಾಗಿದೆ. ಸದ್ಯ ಇದು ಕಾಮಗಾರಿಯ ಹಂತದಲ್ಲಿದೆ. ಶಾಸಕ ಜೆ.ಆರ್.ಲೋಬೋ ಹಾಗೂ ಸ್ಥಳೀಯ ಕಾಪೋರೇಟರ್ ಪ್ರವೀಣ್ ಚಂದ್ರ ಆಳ್ವ ನೇತೃತ್ವದಲ್ಲಿ ನಡೆಯುತ್ತಿರುವ ಕಾಮಗಾರಿ, ಇನ್ನೇನು ಎರಡು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಚಿಣ್ಣರ ಪಾರ್ಕ್ ಸಿದ್ದವಾಗುವ ನಿರೀಕ್ಷೆ ಇದೆ. ಈ ಹಿಂದೆ ಪುಟಾಣಿಗಳು ನಗರದ ಕದ್ರಿ ಪಾರ್ಕ್ಗೆ ಆಟವಾಡಲು ಹೋಗಬೇಕಾಗಿತ್ತು. ವೀಕ್ ಎಂಡ್ನ ಟ್ರಾಫಿಕ್ನಿಂದ ಬೇಸತ್ತು ಜನರು ಮಕ್ಕಳನ್ನು ಮನೆಯಲ್ಲೆ ಆಟವಾಡಿಸುತ್ತಿದ್ದರು. ಆದರೆ ಇದೀಗ ಮನೆ ಪಕ್ಕದಲ್ಲೆ ನಿರ್ಮಾಣವಾದ ಈ ಪಾರ್ಕ್ನಲ್ಲಿ ಈಗಾಗಲೇ ಪುಟಾಣಿಗಳ ದಂಡೇ ಬರುತ್ತಿದೆ..ಪುಟಾಣಿಗಳು ತಮ್ಮ ತಂದೆ ತಾಯಿ ಸ್ನೇಹಿತರೊಂದಿಗೆ ಬಂದು ಸಂಜೆಯ ಹೊತ್ತಿನಲ್ಲಿ ಹಾಗೂ ಪುಟಾಣಿಗಳ ವೀಕ್ ಎಂಡ್ ಮಸ್ತಿ ನೋಡುಗರ ಮನಸೆಳೆಯುತ್ತಿದೆ.
ಪಾರ್ಕ್ನ ವಿಶೇಷತೆ: ಅಂದಾಜು 15 ರಿಂದ 20 ಸೆನ್ಸ್ ಜಾಗದಲ್ಲಿ ತಲೆ ಎತ್ತಿದೆ, ಹಾಗೂ ಪುಟಾಣಿಗಳಿಗೆ ಆಟವಾಡಲು ಜಾರು ಬಂಡಿ,ಉಯ್ಯಾಲೆ,ಹಾಗೂ ಇನ್ನಿತರ ಆಟದ ಸಾಮಾಗ್ರಿಗಳು, ಮಕ್ಕಳಿಗೆ ಹಿರಿಯರಿಗೆ ವಾಕಿಂಗ್ ವೇ,ಕುಳಿತು ಕೊಳ್ಳಲು ಅಚ್ಚು ಕಟ್ಟಾದ ಬೆಂಚುಗಳು,ಹುಲ್ಲು ಹಾಸುವ ಯೋಜನೆ ಇದೆ. ಹಿರಿಯರಿಗೆ ವಾಕಿಂಗ್ ಹಾಗೂ ಪ್ರಕೃತಿ ಗಾಳಿ ಪಡೆಯಲು, ಆರಾಮವಾಗಿ ಸಮಯ ಕಳೆಯಲು ಸನ್ನದ್ಧವಾಗಿದೆ.
ಪ್ರತಿ ಒಂದು ವಾರ್ಡ್ನಲ್ಲಿ ಇಂತಹ ಪಾರ್ಕ್ ನಿರ್ಮಾಣವಾದರೆ ಮಂಗಳೂರು ಅಭಿವೃದ್ಧಿಯತ್ತ ಸಾಗುತ್ತದೆ.ನಾವು ಬೇರೆ ಕಡೆ ಪಾರ್ಕ್ಗಳಿಗೆ ಮಕ್ಕಳನ್ನು ಕರೆದು ಕೊಂಡು ಹೋಗಿ ಆಟ ಆಡಿಸಿ ಬರೋದಕ್ಕಿಂತ ನಮ್ಮ ಮನೆಯ ವಾರ್ಡ್ ನಲ್ಲಿಯೇ ಪಾರ್ಕ್ ನಿರ್ಮಾಣವಾದರೇ ಒಳ್ಳೆಯದಾಗುತ್ತದೆ. ಮನೆಯಲ್ಲಿ ಮಕ್ಕಳನ್ನು ಕಟ್ಟಿ ಹಾಕುವುದಕ್ಕಿಂತ, ಅವರಿಗೂ ಖುಷಿ ಸಿಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಸುಜಾತ.