ಬಂಟ್ವಾಳ, ಫೆ 5 (DaijiworldNews/SM): ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ ಚುನಾವಣೆಯಲ್ಲಿ, ಈಗಾಗಲೇ ಮರಣ ಹೊಂದಿದವರು ಹಾಗೂ ರಸ್ತೆಯಲ್ಲಿ ಹೋಗುವವರು ಮತದಾನ ಮಾಡಿದ್ದಾರೆ ಎಂದು ಮಾಜಿ ಸಚಿವ ರಮನಾಥ ರೈ ಆರೋಪಿಸಿದ್ದಾರೆ.
ಬಂಟ್ವಾಳದ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಅರ್ಹತೆ ಇಲ್ಲದವರಿಗೂ ಮತನೀಡುವ ಅವಕಾಶ ನೀಡಿದ್ದು ನ್ಯಾಯವಲ್ಲ. ಅರ್ಹತೆ ಇರುವವರಿಗೆ ಮಾತ್ರ ಮತ ಹಾಕುವ ವ್ಯವಸ್ಥೆ ಅಗಬೇಕಾಗಿದೆ. ಸದಸ್ಯರಲ್ಲದವರು ಬೋಗಸ್ ಮತಹಾಕಿದ್ದಾರೆ. ಇಂತಹ ವ್ಯವಸ್ಥೆಗಳು ನಿಲ್ಲಬೇಕು ಎಂಬ ದೃಷ್ಟಿಯಿಂದ ಕೋರ್ಟ್ ಮೂಲಕ ನಾವು ತಡೆ ತಂದಿದ್ದೇವೆ ಎಂದು ಅವರು ಹೇಳಿದರು.
ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು, ಸಾಲ ಸುಸ್ತಿದಾರರು, ಅನರ್ಹರ ಹೆಸರಿನಲ್ಲಿ ಮತದಾನ ಮಾಡಲಾಗಿದೆ ಎಂದು ಅಪಾದಿಸಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಜೈನ್ ಅವರು ಹೈಕೋಟ್೯ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಹೈಕೋಟ್೯ ಫೆ.5 ರಂದು ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಾವೆಯ ಮುಂದಿನ ವಿಚಾರಣಾ ದಿನದವರೆಗೆ ತಡೆಯಾಜ್ಙೆ ನೀಡಿ ಆದೇಶಿಸಿದೆ.