ಮಂಗಳೂರು, ಫೆ 06 (Daijiworld News/MB) : ಮನೆಯಲ್ಲಿ ಮಗನಿಂದಲ್ಲೇ ವೃದ್ಧೆ ದಿಗ್ಭಂಧನಕ್ಕೊಳಗಾದ ಕುರಿತು ಮಾಹಿತಿ ಪಡೆದ ಸರ್ಕಾರಿ ಪ್ರಾಯೋಜಿತ ಸಂಸ್ಥೆ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ಮರುಕಳಿಸಿದರೆ ಹಿರಿಯ ನಾಗರಿಕರ ಕಾಯ್ದೆಯಡಿ ಸುಮೊಟೋ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತೊಕ್ಕೊಟ್ಟು ನಾಗನ ಕಟ್ಟೆ ಬಳಿ ಫ್ಲ್ಯಾಟ್ನಲ್ಲಿ ನಾಗೇಶ್ ಶೆಟ್ಟಿಗಾರ್ ಪತ್ನಿ ಗೀತಾ, ತಾಯಿ ಸರಸ್ವತಿ (೭೫) ವರ್ಷಗಳಿಂದ ವಾಸವಾಗಿದ್ದಾರೆ. ನಾಗೇಶ್ ಜಾತ್ರೆ, ಧಾರ್ಮಿಕ ಉತ್ಸವದಲ್ಲಿ ಬೆಡ್ಶೀಟ್ ಮಾರಾಟ ಮಾಡುತ್ತಿದ್ದು ಪತ್ನಿ ಶಿಕ್ಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮಕ್ಕಳು ಇಲ್ಲದ ಹಿನ್ನಲೆಯಲ್ಲಿ ಇತ್ತೀಚೆಗೆ ದತ್ತು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಈ ದಂಪತಿ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಪಾರ್ಶ್ವವಾಯು ಪೀಡಿತರಾಗಿರುವ ಸರಸ್ವತಿಯವರನ್ನು ಕೋಣೆಯಲ್ಲಿ ಬಿಟ್ಟು ಹೋಗುತ್ತಿದ್ದರು. ವೃದ್ಧೆ ಮಲಗಿದ್ದಲ್ಲಿಯೇ ಮಲ ಮೂರ್ತ ಮಾಡುತ್ತಿದ್ದರಿಂದ ಫ್ಲ್ಯಾಟ್ನಲ್ಲಿ ದುರ್ನಾತ ಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಗಳವಾರ ಈ ದಂಪತಿ ಹೊರಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ , ಈ ಹಿನ್ನಲೆಯಲ್ಲಿ ನೆರೆಮನೆಯವರು ಹಿರಿಯ ನಾಗರಿಕ ರಕ್ಷಣಾ ಸಮಿತಿಗೆ ದೂರು ನೀಡಿದ್ದರು.
ಬುಧವಾರವೂ ಮನೆ ಬಾಗಲು ಮುಚ್ಚಿದ್ದು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ, ಸಹಾಯವಾಣಿ ಸಹ ಸಂಯೋಜಕಿ ಲಿರ್ವಿನ್ ಲೋಬೊ, ,ಮಾನವ ಹಕ್ಕು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಯು.ಕೆ ಮಹಮ್ಮದ್ ಮುಸ್ತಫಾ, ಮಹಿಳಾ ವಿಭಾಗ ಸಂಯೋಜಕಿ ಉಷಾ ನಾಯಕ್, ಸದಸ್ಯರಾದ ರಝಿಯಾ ಇಬ್ರಾಹಿಂ, ಶಬೀರ್ ಉಳ್ಳಾಲ, ದೀಪಕ್ ರಾಜೇಶ್ ಕುವೆಲ್ಲೊ, ಮಂಗಳೂರು ವಿವಿ ಸಮಾಜ ಸೇವಾ ವಿದ್ಯಾರ್ಥಿನಿ ದೀಪಾ ಚೌಧರಿ ಬೆಳಿಗ್ಗೆ 10:30 ಗಂಟೆಗೆ ಫ್ಲ್ಯಾಟ್ಗೆ ಆಗಮಿಸಿದ್ದರು. ನಾಗೇಶ್ ಅವರಿಗೆ ಕರೆ ಮಾಡಿದಾಗ ತಾನು ಪುತ್ತೂರಿನಲ್ಲಿರುವುದರಿಂದ ಸಂಜೆ ಬರುವುದಾಗಿ ತಿಳಿಸಿದ್ದರು.
ಆ ಹಿನ್ನಲೆಯಲ್ಲಿ ಎಲ್ಲರೂ ಕಾದು ಕುಳಿತರು. ನಾಗೇಶ್ ಹಾಗೂ ಅವರ ಪತ್ನಿ ಸಂಜೆ 6 ಗಂಟೆಗೆ ಆಗಮಿಸಿದ್ದು ನಾವು ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆಗಾಗಿ ಹೋಗಿದ್ದೆವು, ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ನಮ್ಮಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಆಸ್ಪತ್ರೆಗೆ ಸೇರಿಸಿ ನಾವೇ ಚಿಕಿತ್ಸೆ ಕೊಡಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದಾಗ ಆಸ್ಪತ್ರೆಯಲ್ಲಿ ಕುಳಿತುಕೊಳ್ಳಲು ಜನರಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳು ಪುತ್ರನಿಗೆ ಬುದ್ದಿವಾದ ಹೇಳಿದಾಗ ತಾನು ತಾಯಿಯನ್ನು ಮನೆಯಲ್ಲಿಯೇ ಇರಿಸಿ ಆರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಅಧಿಕಾರಿಗಳು ಎರಡು ದಿನಕ್ಕೊಮ್ಮೆ ಮನೆಗೆ ಆಗಮಿಸಿ ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಯಮುನಾ ಅವರು, "ಇಂತಹ ಪ್ರಕರಣಗಳು ಇನ್ನು ಮುಂದೆ ನಡೆಯದಂತೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಹಿರಿಯ ನಾಗರಿಕೆ ಸಹಾಯವಾಣಿಯ ಪ್ರತಿನಿಧಿಗಳನ್ನು ಎರಡು ದಿನಕ್ಕೊಮ್ಮೆ ಪರಿಶೀಲನೆ ನಡೆಸಲು ಕಳುಹಿಸಲಾಗುವುದು. ಕೆಲವು ದಿನಗಳು ನೋಡಿ ಈ ಪ್ರಕರಣ ಮತ್ತೆ ನಡೆದಲ್ಲಿ ಅವರ ಮೇಲೆ ನಾಗರಿಕ ಕಾಯ್ದೆಯಡಿ ಸುಮೊಟೋ ಪ್ರಕರಣ ದಾಖಲಿಸಲಾಗುವುದು" ಎಂದು ತಿಳಿಸಿದ್ದಾರೆ.