ಬಂಟ್ವಾಳ, ಫೆ.06 (Daijiworld News/PY) : ತೃಪ್ತಿ ಹಾಗೂ ಮಾನವೀಯತೆ ಎನ್ನುವ ಎರಡು ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಶುದ್ದವಾದ ಜೀವನ ನಡೆಸಲು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತರಾದ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಆಶ್ರಯದಲ್ಲಿ ಯುವವಾಹಿನಿ ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ಆತಿಥ್ಯದಲ್ಲಿ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಗುರುವಾರ ನಡೆದ "ತ್ರಿನೇತ್ರ- ನಾಳೆಗಳ ಭರವಸೆ ಕಣ್ಣುಗಳು" ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಮೌಲ್ಯಗಳ ಬಗ್ಗೆ ವಿಷಯಗಳಿರುವುದಿಲ್ಲ. ಚಂದ್ರಲೋಕಕ್ಕೆ ಹೋಗುವುದು ಹೇಗೆ, ಅಟಂಬಾಂಬು ತಯಾರಿ ಮಾಡುವುದು ಹೇಗೆ ಎನ್ನುವುದನ್ನು ಶಾಲೆಗಳಲ್ಲಿ ತಿಳಿಸಿಕೊಡುತ್ತಾರೆ, ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುವುದಿಲ್ಲ ಎಂದರು. ಇಂತಹಾ ವ್ಯವಸ್ಥೆ ಬದಲಾಗಬೇಕು. ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ವಿದ್ಯಾರ್ಥಿಗಳಿಂದ ನಡೆಯಬೇಕು ಎಂದರು.
ಲಯನ್ಸ್ ಕ್ಲಬ್ನ ರಾಜ್ಯಪಾಲ ರೊನಾಲ್ಡ್ ಐಸಕ್ ಗೋಮ್ಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧೈರ್ಯ, ದೃಢತೆ, ಸಾಧಿಸುವ ಛಲ ಇದ್ದಾಗ ನಾವು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು.
ರಾಜಕಾರಣಿಗಳಿಗೆ ವಿದ್ಯಾರ್ಹತೆಯ ಮಾನದಂಡ ಯಾಕಿಲ್ಲ ಎಂಬ ವಿದ್ಯಾರ್ಥಿಯೋರ್ವನ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್ ಹೆಬ್ಬೆಟ್ಟು ಹಾಕಿದವರು ಕೂಡ ಒಂದು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ. ವಿದ್ಯೆಯನ್ನು ಅಕ್ಷರಜ್ಞಾನಕ್ಕೆ ಮಾತ್ರ ಸೀಮಿತಗೊಳಿಸದೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು ಕೂಡ ರಾಜಕೀಯದ ಆರ್ಹತೆ ಎನಿಸಿಕೊಂಡಿದೆ ಎಂದರು.
ಸಮಾಜಸೇವೆಗೆ ಮನಸ್ಸು ಹೊರತು ಅಧಿಕಾರ ಮುಖ್ಯ ಅಲ್ಲ, ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ ಅದರೆ ನಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಇದ್ಯಾವುದು ಗಣನೆಗೆ ಬರುವುದಿಲ್ಲ, ಅಧಿಕಾರ ಇದ್ದರೆ ಕೆಲವೊಂದು ಕೆಲಸಕ್ಕೆ ಅನುಕೂಲವಾಗುತ್ತದೆಯೇ ಹೊರತು ರಾಜಕೀಯ ಮತ್ತು ಸಮಾಜ ಸೇವೆಗೆ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದರು.
ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿಸೋಜ ಮಾತನಾಡಿ, ವಿದ್ಯೆ ಕಲಿಯುವ ವಯಸ್ಸಿನಲ್ಲಿ ಕಾನೂನಿನ ಬಗ್ಗೆಯೂ ಅರಿವು ಮೂಡಿಸಿಕೊಳ್ಳಬೇಕೇ ಹೊರತು ಕಾನೂನು ಕೈಗೆತ್ತಿಕೊಳ್ಳುವ ಕೃತ್ಯ ಮಾಡಬಾರದು, ಇದು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿ 4-5 ವರ್ಷ ಕಳೆದರೂ ಇನ್ನೂ ಜಾರಿಯಾಗದಿರುವುದು ನ್ಯಾಯಾಂಗ ವ್ಯವಸ್ಥೆ ಯ ಮೇಲೆಯೇ ಅನುಮಾನ ಮೂಡುವಂತಾಗಿದೆ. ಗಲ್ಲು ಶಿಕ್ಷೆ ನೀಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ನ್ಯಾಯಾಂಗ ವ್ಯವಸ್ಥೆಯಿಂದ ಗಲ್ಲು ಶಿಕ್ಷೆಯನ್ನೇ ತೆಗೆದುಬಿಡಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಭಯ ಪ್ರಕರಣದಲ್ಲಿ ವ್ಯಕ್ತಿಗಳ ಬೇಜವಾಬ್ದಾರಿಯಿಂದ ನ್ಯಾಯ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪಿಗೆ ಹೈಕೋರ್ಟ್, ಡಿಸ್ಟ್ರಿಕ್ಟ್ ಕೋರ್ಟ್ ಸ್ಟೇ ಕೊಡುವುದು ನ್ಯಾಯವೇ ಎಂದು ಪ್ರಶ್ನಿಸಿದರು. ಆ ಅಧಿಕಾರ ಇರಬಹುದು, ಆದರೆ ಅಧಿಕಾರದ ಸದ್ಭಳಕೆ ಆಗಬೇಕೇ ಹೊರತು ದುರ್ಬಳಕೆ ಸಲ್ಲ ಎಂದು ಅವರು ಕಿವಿಮಾತು ಹೇಳಿದರು.
ದೈಹಿಕ ಸೌಂದರ್ಯಕ್ಕಿಂತ ಮಾನಸಿಕ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಾವು ಎಲ್ಲಿದ್ದೆವೆ ಏನು ಮಾಡುತ್ತಿದ್ದೆವೆ ಎಂಬ ಅರಿವು ಇದ್ದಾಗ ಏಕಾಗ್ರತೆ ವೃದ್ದಿಸುತ್ತದೆ ಮನಃಶಾಸ್ತ್ರ ಸಂವಾದದಲ್ಲಿ ಖ್ಯಾತ ಮನೋರೋಗ ತಜ್ಞರಾದ ಡಾ. ರವೀಶ ತುಂಗಾ ಹಾಗೂ ಡಾ. ರಮೀಳಾ ಶೇಖರ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅನಿತಾ ರೋನಾಲ್ಡ್ ಗೋಮ್ಸ್ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಲಯನ್ಸ್ ಕ್ಲಬ್ನ ಪ್ರಥಮ ಉಪ ರಾಜ್ಯಪಾಲ ಗೀತ್ ಪ್ರಕಾಶ್, ದ್ವಿತೀಯ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಇಂದಿರೇಶ್ ಬಿ. ಉಪಸ್ಥಿತರಿದ್ದರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಸಂಚಾಲಕ ಚೇತನ್ ಮುಂಡಾಜೆ ವಂದಿಸಿದರು. ದಿನೇಶ್ ಸುವರ್ಣ ರಾಯಿ, ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ಲಯನ್ಸ್ ಉಪಾಧ್ಯಕ್ಷ ಕೃಷ್ಣಶ್ಯಾಮ್, ಸದಸ್ಯ ರಾಘವೇಂದ್ರ ಕಾರಂತ, ಯುವವಾಹಿನಿ ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ, ಲಯನ್ಸ್ನ ಕಾರ್ಯಾಗಾರ ಸಂಚಾಲಕ ಶಿವಪ್ರಸಾದ್, ಚೇತನ್ ಮುಂಡಾಜೆ ಉಪಸ್ಥಿತರಿದ್ದರು. ಜಿಲ್ಲೆಯ 22 ಕಾಲೇಜಿನ 975 ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.