ವಿಟ್ಲ: ಫೆ 6 (DaijiworldNews/SM): ಅಂಗಡಿಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಕುಖ್ಯಾತ ಅಂತರಾಜ್ಯ ದರೋಡೆಕೋರನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ.
ಚಿಕ್ಕಮುಡ್ನೂರು ಕೆರೆಮೂಲೆ ನಿವಾಸಿ ಕೆ. ಮಹಮ್ಮದ್ ಸಲಾಮ್ ಯಾನೆ ಸಲಾಮ್ ಯಾನೆ ಡಾಲರ್ ಸಲಾಮ್(28) ಬಂಧಿತ ದರೋಡೆಕೋರನಾಗಿದ್ದಾನೆ. ಫೆಬ್ರವರಿ 2 ರಾತ್ರಿ ನೆಟ್ಲಮುಡ್ನೂರು ಗ್ರಾಮದ ಕೊಡಾಜೆಯಲ್ಲಿ ಅಂಗಡಿಯೊಂಡರ ಶಟರ್ ಬೀಗ ಮುರಿಯಲು ಯತ್ನಿಸಿದ ಪ್ರಕರಣದ ಆರೋಪಿಯಾಗಿದ್ದು, ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯದಿಂದ ಉತ್ತಮ ಕಲಾವಿದ:
ಶಾಲಾ ಜೀವನದಲ್ಲಿ ಹಾಡುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಲೂ ಉತ್ತಮ ಧ್ವನಿಯನ್ನು ಹೊಂದಿದ್ದಾನೆನ್ನಲಾಗಿದೆ. ಆದರೆ ಬಾಲ್ಯದಿಂದ ಸರಿಯಾದ ಮಾರ್ಗದರ್ಶನ ಸಿಗದ ಕಾರಣ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನದ ಹಾದಿಯನ್ನು ಹಿಡಿದ್ದಾನೆ ಎನ್ನಲಾಗಿದೆ.
ಡ್ರಗ್ಸ್ ಮಾಫಿಯಾದಲ್ಲಿ ಕೆಲಸ:
ಸುಮಾರು 7 ವರ್ಷದ ಹಿಂದೆ ಗೋವಾ ಕಡೆಗೆ ಹೋದ ಈತ ಅಲ್ಲಿ ವಿದೇಶಿಗರ ಜತೆಗೆ ಸೇರಿಕೊಂಡು ಭಯಾನಕ ಡ್ರಗ್ಸ್ ಮಾಫಿಯಾದಲ್ಲಿ ತನ್ನನ್ನು ತೊಡಗಿಕೊಂಡಿದ್ದಾನೆ. ಅಲ್ಲಿ ಸಿಗುತ್ತಿದ್ದ ಹಣದಿಂದ ಶೋಕಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಇನ್ನು ಶೋಕಿ ಜೀವನಕ್ಕೆ ಮಾಫಿಯಾದಲ್ಲಿ ಸಿಗುವ ಕಮೀಷನ್ ಹಣ ಸಾಕಾಗದ ಸಮಯದಲ್ಲಿ ಸಣ್ಣಪುಟ್ಟ ಪಿಕ್ ಪಾಕೆಟ್ ಕೆಲಸಕ್ಕೆ ಕೈ ಹಾಕಿದ ಈತ ಅದರಲ್ಲಿ ಸಫಲನಾಗುತ್ತಿದ್ದಂತೆ ದೊಡ್ಡ ಮಟ್ಟದ ದರೋಡೆಗೆ ಇಳಿಯಲಾರಂಭಿಸಿದ್ದಾನೆ ಎನ್ನಲಾಗಿದೆ.
ಗೋವಾದಲ್ಲಿ ದರೋಡೆ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನೂ ಕೂಡ ಈತ ಅನುಭವಿಸಿದ್ದ ಎನ್ನಲಾಗಿದೆ. ಪುತ್ತೂರು ಡಕಾಯಿತಿ, ಕೇರಳದ ಬ್ಲಾಕ್ ಮೇಲ್ ಪ್ರಕರಣದ ಆರೋಪಿಯಾದ ಈತ ಇತ್ತೀಚೆಗೆ ಬಿ.ಸಿ.ರೋಡ್ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ.
ಇನ್ನು ದ.ಕ. ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಪ್ರೊಬೆಷನರಿ ಪಿ ಎಸ್ ಐ ವಿನೋದ್ ರೆಡ್ಡಿ ಅವರ ಸೂಚನೆಯಂತೆ ಸಿಬ್ಬಂದಿಗಳಾದ ಪ್ರಸನ್ನ, ಪ್ರತಾಪ, ವಿನಾಯಕ, ಲೋಕೇಶ ಅವರು ಕಾರ್ಯಾಚರಣೆ ನಡೆಸಿದ್ದಾರೆ.