ಮಂಗಳೂರು, ಫೆ 7 (DaijiworldNews/SM): ಮೂಡುಬಿದಿರೆಯ ಕರಿಂಜೆ ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಫೆಬ್ರವರಿ 9ರಿಂದ 19ರವರೆಗೆ ನೂತನ ಗರ್ಭಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ , ಅಷ್ಟಪವಿತ್ರ ನಾಗಮಂಡಲ ಹಾಗೂ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೈ ಮಾರುಕಟ್ಟೆ ಸಂಕೀರ್ಣದಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರವನ್ನು ಕದ್ರಿಯ ನಂದಗೋಪಾಲ ಶೆಣೈ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅವಿಭಜಿತ ಜಿಲ್ಲೆಯಲ್ಲಿ ಇಂದು ಬಹಳಷ್ಟು ಕ್ಷೇತ್ರಗಳು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ಆದರೆ ಇದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಸರ್ವಧರ್ಮದ ಬಾಂಧವರ ಹಬ್ಬದಂತೆ ನಡೆಯುವುದು ವಿಶೇಷವಾಗಿದೆ. ಈ ಮೂಲಕ ಸಮಾಜವನ್ನೂ ಒಗ್ಗೂಡಿಸಿಕೊಂಡು ಸಂಘಟನಾತ್ಮಕವಾಗಿ ಬ್ರಹ್ಮಕಲಶೋತ್ಸವಗಳು ಆಯೋಜನವಾಗುವುದು ಹರ್ಷದ ಸಂಗತಿ ಎಂದರು.
ಮುಖ್ಯ ಅತಿಥಿ ದೇರೆಬೈಲು ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ಕ್ಷೇತ್ರ ಕೊಂಚಾಡಿ ಇದರ ಆಡಳಿತ ಮೊಕ್ತೇಸರ ರಮಾನಂದ ಭಂಡಾರಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಉಪಮೇಯರ್ ರಜನೀಶ್, ದೇರೇಬೈಲ್ ಕಾರ್ಪೋರೇಟರ್ ಶರತ್ ಕುಮಾರ್, ಮಾಜಿ ಕಾರ್ಪೋರೇಟರ್ ಪ್ರಕಾಶ್ ಬಿ ಸಾಲ್ಯಾನ್, ಚಿತ್ತರಂಜನ್ ಕೊಡಿಯಾಲ್ಬೈಲ್, ಬಸವರಾಜ್, ಮೋನಪ್ಪ ಬಿಜೈ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಪ್ರಕಾಶ್ ಬಿ ಎನ್, ರಜಕ ಯೂತ್ ಸಂಘದ ಅಧ್ಯಕ್ಷ ಸಂಪತ್ ಕೊಂಡಾಣ, ಮೋಹನ್ ಅಳಪೆ ಮೊದಲಾದವರು ಉಪಸ್ಥಿತರಿದ್ದರು. ಅಶೋಕ್ ಪೊಳಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬೇಕಲ್ ಧನ್ಯವಾದ ಸಲ್ಲಿಸಿದರು.
ಬಿಜೈ ಮಾರುಕಟ್ಟೆ ಮುಂಭಾಗದಲ್ಲಿಯೇ ಈ ಹೊರೆ ಕಾಣಿಕೆ ಸಂಗ್ರಹ ಕೇಂದ್ರವನ್ನು ತೆರೆಯಲಾಗಿದ್ದು, ಬೆಳಿಗ್ಗೆಯಿಂದ ರಾತ್ರಿಯವರೆಗೆ ತೆರೆದಿರುತ್ತದೆ. ಭಕ್ತರು ಹೊರೆಕಾಣಿಕೆಗಳನ್ನು ಈ ಕೇಂದ್ರಕ್ಕೆ ತಂದು ಸಲ್ಲಿಸಬಹುದಾಗಿದೆ.