ಮಂಗಳೂರು, ಫೆ 7 (Daijiworld News/MSP): ಡಿಸೆಂಬರ್ 19ರಂದು ನಡೆದ ಅಹಿತಕರ ಘಟನೆ ಮತ್ತು ಪೊಲೀಸ್ ಗೋಲಿಬಾರ್ ಕುರಿತು ನಡೆಯುತ್ತಿರುವ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸುತ್ತಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ , ಗುರುವಾರ ಮಂಗಳೂರು ಸಹಾಯಕ ಅಯುಕ್ತರ ಕೋರ್ಟ್ ಹಾಲ್ನಲ್ಲಿ ಸಾರ್ವಜನಿಕರಿಂದ ಸಾಕ್ಷಿ ಸಂಗ್ರಹಿಸಿದರು.
ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭಿಸಿದ ಜಗದೀಶ್, 75 ಜನರಿಂದ ಹೇಳಿಕೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ವಕೀಲರ ಮೂಲಕ ಹೇಳಿಕೆ ದಾಖಲಿಸಲು ಅವಕಾಶ ಇಲ್ಲದೆ ಇದ್ದುದರಿಂದ ಸಾರ್ವಜನಿಕರು ಖುದ್ದು ಹಾಜರಾಗಿ ಹೇಳಿಕೆ ನೀಡಿದರು. ಗೋಲಿಬಾರ್ನಿಂದ ಸಾವನ್ನಪ್ಪಿದ ಜಲೀಲ್ನ ಸಂಬಂಧಿಕರು (ಮಹಿಳೆಯರು) ಕೂಡ ಸಾಕ್ಷಿ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದರು.
ಆ ಬಳಿಕ ಮಾತನಾಡಿದ ತನಿಖಾಧಿಕಾರಿ ಜಗದೀಶ್ "ಇದು ಮ್ಯಾಜಿಸ್ಟೀರಿಯಲ್ ತನಿಖೆಯ ಭಾಗವಾಗಿ ನಡೆದ 5ನೇ ಬೈಠಕ್ ಆಗಿದ್ದು, ಇಂದು 75 ಜನರ ಸಾಕ್ಷಿ ಸೇರಿದಂತೆ ಈವರೆಗೆ ಒಟ್ಟು 201 ಸಾಕ್ಷಿಗಳು ಹೇಳಿಕೆಗಳನ್ನು ನೀಡಿದಂತಾಗಿದೆ" ಎಂದು ತಿಳಿಸಿದರು.
ಇಂದು ಅಂತಿಮ ಅಹವಾಲು ಸಲ್ಲಿಕೆ ಎಂದು ಈ ಹಿಂದೆ ತಿಳಿಸಿದ್ದರೂ ಇದೀಗ ಹೈಕೋರ್ಟ್ನ ಸೂಚನೆಯಂತೆ ಫೆ. 13ರಂದು ಇನ್ನೊಂದು ಬೈಠಕ್ ನಡೆಸಲಾಗುವುದು. ಇಂದು ಮೌಖೀಕವಾಗಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದ 8 ಮಂದಿಗೆ ಫೆ. 13ರಂದು ಅಫಿದವಿತ್ ಸಮೇತ ಬಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪೊಲೀಸರು ತಮ್ಮ ಬಳಿ ಇರುವ ವೀಡಿಯೋ ಮತ್ತು ಸಿಸಿ ಕೆಮರಾದ ಸಾಕ್ಷಿಗಳನ್ನು ಅಂದು ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಮಾಧ್ಯಮದವರು ಮತ್ತು ಇತರ ಸಾರ್ವಜನಿಕರು ಕೂಡ ವೀಡಿಯೋ ಸಾಕ್ಷ್ಯಗಳಿದ್ದರೆ ಸಲ್ಲಿಸಬಹುದು. ಇನ್ನು ಪೊಲೀಸರ ವಿಚಾರಣೆ ಪ್ರತ್ಯೇಕ ದಿನ ನಿಗದಿಪಡಿಸಲಾಗುವುದು ಎಂದು ಜಗದೀಶ್ ವಿವರಿಸಿದರು. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ಉಪಸ್ಥಿತರಿದ್ದರು.