ಮಂಗಳೂರು, ಫೆ.07 (Daijiworld News/PY) : ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಗುರುವಾರದಂದು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ 40 ದಿನ ಪ್ರಾಯದ ಮಗುವನ್ನು ತುರ್ತು ಹೃದಯ ಚಿಕಿತ್ಸೆಗಾಗಿ ಕೆಎಂಸಿ ಆ್ಯಂಬುಲೆನ್ಸ್ ಮೂಲಕ ಸಾಗಿಸಿದ ಚಾಲಕ ಹನೀಫ್ ಬಳಂಜ ಅವರು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದರೆ.
ದಾಖಲೆ ಸಮಯದಲ್ಲಿ ಮಗುವನ್ನು ಬೆಂಗಳೂರು ತಲುಪಿಸಿದ ಚಾಲಕ ಹನೀಫ್ ಬಳಂಜ ಅವರಿಗೆ ಆಸ್ಪತ್ರೆಯ ಆವರಣದಲ್ಲಿ ಜನರು ಭವ್ಯ ಸ್ವಾಗತ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹನೀಫ್ ಅವರು, ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಮಂಗಳೂರಿನಿಂದ ಆ್ಯಂಬುಲೆನ್ಸ್ ಮಧ್ಯಾಹ್ನ 12:05ಕ್ಕೆ ಹೊರಟು, ಸಂಜೆ 4:35ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿಸಿದೆ ಎಂದು ತಿಳಿಸಿದರು.
ಹನೀಫ್ ಬಳಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯವರು. ಬೆಂಗಳೂರು ಕೆ.ಎಂ.ಸಿ.ಸಿ. ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹನೀಫ್ ಬಳಂಜ ಅವರು ಕೇರಳ ಸರಕಾರದ ರಸ್ತೆ ಸುರಕ್ಷಾ ವಿಭಾಗದಿಂದ ಕೊಡಮಾಡುವ ಅತ್ಯುತ್ತಮ ಆ್ಯಂಬುಲೆನ್ಸ್ ಚಾಲಕ ಪ್ರಶಸ್ತಿಯನ್ನು ಪಡೆದ ಯುವ ಚಾಲಕರಾಗಿದ್ದಾರೆ.