ಕಡಬ, ಫೆ.07 (Daijiworld News/PY) : ಕೋಡಿಂಬಾಳದ ಕೊಠಾರಿಯಲ್ಲಿ ಜ.23ರಂದು ಮಹಿಳೆ ಮೇಲೆ ಆಕೆಯ ಗಂಡನ ಅಣ್ಣನೇ ಆಸಿಡ್ ಎರಚಿದ್ದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಕಡಬ ಪೊಲೀಸರ ವಿರುದ್ದ ಕರ್ತವ್ಯ ಲೋಪ ಆರೋಪ ಕೇಳಿ ಬಂದಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿರುವ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ ಅವರು ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದು, ಆರೋಪಿ ಜಯಾನಂದ ಕೊಠಾರಿಯು ಸಂತ್ರಸ್ತೆ ಸ್ವಪ್ನ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದರೂ, ಪೊಲೀಸರು ಸಕಾಲಕ್ಕೆ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ತಪ್ಪಿತಸ್ಥ ಪೊಲೀಸರ ವಿರುದ್ದ ಇಲಾಖೆ ಶಿಸ್ತು ಕ್ರಮದ ಚಿಂತನೆ ನಡೆಯುತ್ತಿದೆ.
ಜಮೀನು ಹಾಗೂ ಹಣಕಾಸಿನ ವಿಚಾರವೇ ಘಟನೆಗೆ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು. ಅಕ್ರಮ ಪ್ರವೇಶ, ಶಾಂತಿ ಕದಡುವ ಉದ್ದೇಶದಿಂದ ನಿಂದನೆ, ಜೀವ ಬೆದರಿಕೆ ಹಾಗೂ ಆಸಿಡ್ ದಾಳಿಯ ಆರೋಪಗಳಷ್ಟೇ ಎಫ್ಐಆರ್ನಲ್ಲಿತ್ತು. ಪೊಲೀಸರ ವಿರುದ್ದ ಕರ್ತವ್ಯ ಲೋಪದ ಆರೋಪ ಕೇಳಿಬಂದ ನಂತರ ಎಫ್ಐಆರ್ ಪರಿಷ್ಕರಿಸಲಾಗಿದ್ದು, ಮಹಿಳೆಯ ವ್ಯಕ್ತಿತ್ವಕ್ಕೆ ಕುಂದು ತರುವ ಯತ್ನ ಹಾಗೂ ಲೈಗಿಂಕ ದೌರ್ಜನ್ಯಕ್ಕೆ ಯತ್ನ ಅಡಿಯಲ್ಲೂ ಆರೋಪ ದಾಖಲಿಸಲಾಗಿದೆ.
ಜ.23ರಂದು ಜಯಾನಂದ ಕೊಠಾರಿಯು ಸ್ವಪ್ನ ಅವರ ಮೇಲೆ ಆಸಿಡ್ ದಾಳಿ ನಡೆಸಿದ್ದ, ಇದರ ಪರಿಣಾಮ ಸ್ವಪ್ನ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಎರಡು ವರ್ಷದ ಮಗುವಿಗೂ ಗಾಯಗಳಾಗಿವೆ.
ಈ ಪ್ರಕರಣದಲ್ಲಿ ಕಡಬ ಪೊಲೀಸರು ಲೋಪ ಎಸಗಿದ್ದಾರೆ ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆರೋಪಿ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸಹಿತ ಹಲವು ಪ್ರಮುಖರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ತೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೇ ಪ್ರಕರಣದ ಕುರಿತು ಸಮಗ್ರ ತನಿಖೆ ಸೂಚಿಸಿದ್ದರು.
ಆ ನಂತರ ಘಟನೆ ವಿಚಾರವಾಗಿ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಪಿ ಅವರು ಡಿವೈಎಸ್ಪಿಗೆ ಸೂಚಿಸಿದ್ದರು. ಸಂತ್ರಸ್ತ ಮಹಿಳೆ ತೀವ್ರ ನಿಗಾ ಘಟಕದಿಂದ ವಾರ್ಡ್ಗೆ ಸ್ಥಳಾಂತರವಾದ ನಂತರ ಡಿವೈಎಸ್ಪಿಯು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆ ನಿರಂತರವಾಗಿ ಪೊಲೀಸರ ನೆರವು ಕೋರಿದ್ದರು ಹಾಗೂ ದೌರ್ಜನ್ಯದ ವಿಚಾರವಾಗಿ ಮೊದಲೇ ಮಾಹಿತಿ ನೀಡಿದ್ದರು. ಆದರೂ ಪೊಲೀಸರು ಸ್ಪಂದಿಸಿರಲಿಲ್ಲ. ಆಸಿಡ್ ದಾಳಿ ನಂತರ ಮಹಜರು ಪ್ರಕ್ರಿಯೆಯಲ್ಲೂ ಲೋಪವಾಗಿದೆ. ಆರೋಪಿಯು ಆಸಿಡ್ ದಾಳಿಗೂ ಮೊದಲು ಸಂತ್ರಸ್ತೆಯನ್ನು ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿದ್ದ ಎಂದು ಡಿವೈಎಸ್ಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.